ರಾಯಗಡ(ಒಡಿಶಾ): ಜಿಲ್ಲೆಯ ಕಾಶಿಪುರ ಬ್ಲಾಕ್ ವ್ಯಾಪ್ತಿಯ ಕಾಕುಡಿಪದವಿನಲ್ಲಿ ಅತಿಸಾರ ಭೇದಿ ಕಾಣಿಸಿಕೊಂಡು 6 ಮಂದಿ ಸಾವನ್ನಪ್ಪಿದ್ದು, 40 ಮಂದಿ ಅಸ್ವಸ್ಥಗೊಂಡಿದ್ದಾರೆ. ಇವರೆಲ್ಲ ಟಿಕಿರಿ ಮತ್ತು ಕಾಶಿಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
2008 ರಲ್ಲಿ ರಾಯಗಡ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಅತಿಸಾರ ಭೇದಿ ಪ್ರಕರಣಗಳು ವರದಿಯಾಗಿದ್ದರೆ, 2010ರಲ್ಲಿ ಕಾಲರಾ ಇದೇ ರೀತಿ ಇತ್ತು. ಮಳೆಗಾಲದ ಆರಂಭದಿಂದ ಆಗಸ್ಟ್‌ವರೆಗೆ ಈ ಪ್ರವೃತ್ತಿ ಕಂಡು ಬಂದಿದೆ.
ಟಿಕಿರಿ ಗ್ರಾಮದ ಧೋಬಾ ಮಾಜ್ಹಿ (36) ಮತ್ತು ದುಡುಕಬಹಾಲ್ ಗ್ರಾಮದ ಸಬಿತಾ ನಾಯ್ಕ್ (40) ನಿನ್ನೆ ಮೃತಪಟ್ಟರೆ, ಇಂದು ನಾಲ್ವರು ಸಾವಿಗೀಡಾಗಿದ್ದಾರೆ. ಮೃತರನ್ನು ಟಿಕಿರಿ ಗ್ರಾಮದ ಸರೋಜಿನಿ ಜೊಡಿಯಾ (30), ಅಂಜ್ ಜೊಡಿಯಾ (19), ರಜನಿ ಜೊಡಿಯಾ (19) ಮತ್ತು ಕನೇಯಿ ಮಾಜ್ಹಿ (56) ಎಂದು ಗುರುತಿಸಲಾಗಿದೆ.
ತೀವ್ರ ಅಸ್ವಸ್ಥರಾದ 14 ಮಂದಿಯನ್ನು ಜಿಲ್ಲಾ ಮುಖ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೇ ರೀತಿ ಕಾಶಿಪುರ, ಟಿಕೂರಿನ ಎರಡು ಆರೋಗ್ಯ ಕೇಂದ್ರಗಳಲ್ಲಿ ಉಳಿದ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೆಯೇ ಅಸ್ವಸ್ಥರ ಸಂಖ್ಯೆ ಹೆಚ್ಚುತ್ತಲೆ ಇದೆ. ಈ ಘಟನೆ ದುರದೃಷ್ಟಕರ ಎಂದು ಕೋರಾಪುಟ್ ಸಂಸದ ಸಪ್ತಗಿರಿ ಉಲ್ಕಾ ಹೇಳಿದ್ದಾರೆ. ಕಲುಷಿತ ನೀರನ್ನು ಪರೀಕ್ಷಿಸದೇ ಪೈಪ್‌ಗಳ ಮೂಲಕ ಸರಬರಾಜು ಮಾಡಲಾಗಿದೆ. ಈ ಬಗ್ಗೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಅವರಿಗೆ ಅರಿವು ಮೂಡಿಸಬೇಕು ಎಂದು ಸೂಚನೆ ನೀಡಿದರು.
ಕಾಶಿಪುರ ಬ್ಲಾಕ್‌ನ ವಿವಿಧ ಬ್ಲಾಕ್‌ಗಳಿಗೆ ವಿಶೇಷ ವೈದ್ಯರ ತಂಡವನ್ನು ಕಳುಹಿಸಲಾಗಿದೆ ಎಂದು ರಾಯಗಡ ಜಿಲ್ಲಾಧಿಕಾರಿ ಸ್ವಧಾ ದೇಬ್ ಸಿಂಗ್ ತಿಳಿಸಿದ್ದಾರೆ. ಈ ವೇಳೆ, ಮಾತನಾಡಿದ ಅವರು, ವಿಶೇಷ ವೈದ್ಯಕೀಯ ತಂಡ ಇಂದು ವಿವಿಧ ಗ್ರಾಮಗಳಿಗೆ ತೆರಳಿ ಚಿಕಿತ್ಸೆ ಆರಂಭಿಸಿದೆ. ಆ ಪ್ರದೇಶದಲ್ಲಿ ಕುಡಿಯುವ ನೀರು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಎತ್ತಿನ ಭಾರಕ್ಕೆ ನೊಗವಾದ 'ರೋಲಿಂಗ್ ಸಪೋರ್ಟ್'.. ವಿದ್ಯಾರ್ಥಿಗಳಿಂದ 'ಸಾರಥಿ' ನಿರ್ಮಾಣ