ನವದೆಹಲಿ : ವಿದೇಶದಲ್ಲಿ ಭಾರತದ ವಿರುದ್ಧ ಟೀಕೆ ಮಾಡುವುದು ವಿಪರ್ಯಾಸ ಮತ್ತು ನೋವಿನ ಸಂಗತಿ ಎಂದು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಸರು ಹೇಳದೆ ಅವರಿಗೆ ಉಪರಾಷ್ಟ್ರಪತಿಗಳು ಪರೋಕ್ಷವಾಗಿ ತಿವಿದಿದ್ದಾರೆ. ಹಿರಿಯ ರಾಜಕಾರಣಿ ಕರಣ್ ಸಿಂಗ್ ಬರೆದ ‘ಮುಂಡಕ ಉಪನಿಷದ್: ದಿ ಬ್ರಿಡ್ಜ್ ಟು ಇಮ್ಮಾರ್ಟಲಿಟಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಧನ್ಕರ್, ಎಷ್ಟು ವಿಪರ್ಯಾಸ, ಎಷ್ಟು ನೋವಿನ ಸಂಗತಿ! ನಮ್ಮ ಐತಿಹಾಸಿಕ ಸಾಧನೆಗಳನ್ನು ಮತ್ತು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಗತ್ತು ಶ್ಲಾಘಿಸುತ್ತಿರುವಾಗ, ನಮ್ಮಲ್ಲಿ ಕೆಲ ಸಂಸದರು ಸೇರಿದಂತೆ, ನಮ್ಮ ಸುವ್ಯವಸ್ಥಿತ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ವಿಚಾರಹೀನ ಹಾಗೂ ಅನ್ಯಾಯದ ಹೆಸರಲ್ಲಿ ಅವಹೇಳನ ಮಾಡುತ್ತಿದ್ದಾರೆ. ವಾಸ್ತವಿಕವಾಗಿ ಸಮರ್ಥನೀಯವಲ್ಲದ ಇಂತಹ ಅನಗತ್ಯ ಟೀಕೆಗಳನ್ನು ಯಾರೂ ಸಮರ್ಥಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಭಾರತವು ಜಿ 20 ಅಧ್ಯಕ್ಷನಾಗಿ ತನ್ನ ವೈಭವದ ಕ್ಷಣವನ್ನು ಹೊಂದಿರುವ ಸಮಯದಲ್ಲಿ, ದೇಶದ ಹೊರಗೆ ಜನರು ರಾಷ್ಟ್ರವನ್ನು ಅವಹೇಳನ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ನಮ್ಮ ಸಂಸತ್ತು ಮತ್ತು ಸಾಂವಿಧಾನಿಕ ಘಟಕಗಳನ್ನು ಕಳಂಕಗೊಳಿಸುವ, ಇಂಥ ತಪ್ಪಾದ ಪ್ರಚಾರ ವಿಧಾನಗಳು ತುಂಬಾ ಗಂಭೀರವಾಗಿದೆ. ಇಂಥ ಅಪಪ್ರಚಾರವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಯಾವುದೇ ರಾಜಕೀಯ ಕಾರಣಕ್ಕಾಗಿ ಅಥವಾ ಪಕ್ಷಪಾತದ ನಿಲುವು ನಮ್ಮ ರಾಷ್ಟ್ರೀಯತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳುವುದನ್ನು ಸಮರ್ಥಿಸುವುದಿಲ್ಲ ಎಂದು ಉಪರಾಷ್ಟ್ರಪತಿ ಹೇಳಿದರು.
ಭಾರತದ ಸಂಸತ್ತಿನಲ್ಲಿ ಮೈಕ್‌ಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬ ಹೇಳಿಕೆಯನ್ನು ನಾನು ಹೇಗೆ ಒಪ್ಪಿಕೊಳ್ಳುವುದು? ಕೆಲ ಜನರು ಇಂಥ ಮಾತುಗಳನ್ನು ಹೇಗೆ ಹೇಳುತ್ತಾರೆ? ಅವರ ಮಾತುಗಳಿಗೆ ಯಾವುದಾದರೂ ಆಧಾರ ಇದೆಯೇ? ಭಾರತದ ರಾಜಕೀಯ ಇತಿಹಾಸದಲ್ಲಿ ನಾವು ಕರಾಳ ಅಧ್ಯಾಯ ಹೊಂದಿರುವುದು ನಿಜ. ತುರ್ತು ಪರಿಸ್ಥಿತಿಯ ಘೋಷಣೆಯು ಕರಾಳ ಅವಧಿಯಾಗಿದೆ. ಆದರೆ ಭಾರತೀಯ ಪ್ರಜಾಸತ್ತಾತ್ಮಕ ರಾಜಕೀಯ ವ್ಯವಸ್ಥೆ ಈಗ ಪ್ರಬುದ್ಧವಾಗಿದೆ. ಹಿಂದೆ ಆಗಿದ್ದನ್ನು ಈಗ ಪುನರಾವರ್ತಿಸಲು ಸಾಧ್ಯವಿಲ್ಲ ಎಂದು ಅವರು ನುಡಿದರು.
ಸಂಸತ್ತಿನಲ್ಲಿ ಮೈಕ್‌ಗಳನ್ನು ಬಂದ್ ಮಾಡಲಾಗುತ್ತಿದೆ ಎಂದು ದೇಶದ ಒಳಗೆ ಅಥವಾ ಹೊರಗೆ ಕೆಲವರು ಹೇಳುತ್ತಿದ್ದಾರೆ. ಆದರೆ, ಸುಮಾರು 50 ನಿಮಿಷಗಳ ಕಾಲ ಸಂಸತ್ತಿನ ಕಲಾಪ ನಡೆಯದಂತೆ ಧರಣಿ ನಡೆಸಿದ ನಂತರ ಅವರು ಇಂಥ ಮಾತುಗಳನ್ನು ಹೇಳುತ್ತಿದ್ದಾರೆ ಎಂದರೆ ನೀವು ಅರ್ಥ ಮಾಡಿಕೊಳ್ಳಿ. ನಮ್ಮ ಪ್ರಜಾಪ್ರಭುತ್ವ ಮೌಲ್ಯಗಳನ್ನು ಹಾಳುಮಾಡುವ ಇಂಥ ಪ್ರಯತ್ನಗಳನ್ನು ನೋಡಿ ಸುಮ್ಮನಿರಲು ಸಾಧ್ಯವಿಲ್ಲ. ಈ ಶಕ್ತಿಗಳನ್ನು ಜನರ ಎದುರು ಬಹಿರಂಗಪಡಿಸುವಂತೆ ಮತ್ತು ಅವು ಮತ್ತೆ ತಲೆ ಎತ್ತದಂತೆ ಮಾಡಲು ನಮ್ಮ ಬುದ್ಧಿಜೀವಿಗಳು, ಮಾಧ್ಯಮಗಳು ಮತ್ತು ಯುವಕರಿಗೆ ನಾನು ಕರೆ ನೀಡುತ್ತೇನೆ ಎಂದು ಅವರು ಹೇಳಿದರು.
ನಾನೇ ರಾಜ್ಯಸಭೆಯ ಅಧ್ಯಕ್ಷನಾಗಿದ್ದೇನೆ. ಯಾರಾದರೂ ಮುಂದೆ ಬಂದು ಮೈಕ್‌ಗಳನ್ನು ಆಫ್ ಮಾಡಲಾಗಿದೆ ಎಂದು ಹೇಳಲಿ ಎಂದು ಅವರು ಸವಾಲು ಹಾಕಿದರು. ಸಂವಿಧಾನದ ಪ್ರಕಾರ ಭಾರತದಲ್ಲಿ ಸಂಪೂರ್ಣ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಮತ್ತು ಪ್ರಪಂಚದ ಯಾವುದೇ ಪ್ರಜಾಪ್ರಭುತ್ವವು ನಮ್ಮ ಪ್ರಜಾಪ್ರಭುತ್ವಕ್ಕೆ ಸಾಟಿಯಿಲ್ಲ ಎಂದು ಧನ್ಕರ್ ಪುನರುಚ್ಚರಿಸಿದರು.
ಇದನ್ನೂ ಓದಿ : 3ನೇ ಬಾರಿ ಸಿಎಂ ಹುದ್ದೆಗೇರಿದ ದೀದಿಗೆ ಶುಭಕೋರಿದ ಪ್ರಧಾನಿ ಮೋದಿ