ನವದೆಹಲಿ: ನಿಯಮಗಳನ್ನು ಸರಿಯಾಗಿ ಪಾಲಿಸದ ಏರ್ ಇಂಡಿಯಾಗೆ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) 10 ಲಕ್ಷ ರೂಪಾಯಿ ದಂಡದ ಬರೆ ಹಾಕಿದೆ. ಇದಕ್ಕೂ ಮುನ್ನ ನವೆಂಬರ್ 3ರಂದು ವಿಮಾನಯಾನ ನಿಯಂತ್ರಕರು ಏರ್ ಇಂಡಿಯಾಗೆ ಶೋಕಾಸ್ ನೋಟಿಸ್ ನೀಡಿದ್ದರು.
"ದೆಹಲಿ, ಕೊಚ್ಚಿ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿನ ಏರ್ ಇಂಡಿಯಾ ಘಟಕಗಳನ್ನು ಪರಿಶೀಲಿಸಿದ ನಂತರ ವಿಮಾನಯಾನ ಸಂಸ್ಥೆಯು ನಾಗರಿಕ ವಿಮಾನಯಾನ ನಿಬಂಧನೆಗಳನ್ನು (ಸಿಎಆರ್) ಸರಿಯಾಗಿ ಅನುಸರಿಸುತ್ತಿಲ್ಲ ಎಂದು ಕಂಡುಬಂದಿದೆ" ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ನವೆಂಬರ್ 3ರಂದು ನಿಯಂತ್ರಕರಿಂದ ಏರ್ ಇಂಡಿಯಾಗೆ ಶೋಕಾಸ್ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು. ನೋಟಿಸ್‌ಗೆ ಏರ್ ಇಂಡಿಯಾದಿಂದ ಬಂದ ಪ್ರತಿಕ್ರಿಯೆಯನ್ನು ಆಧರಿಸಿ ಪ್ರಯಾಣಿಕರಿಗೆ ಸೌಲಭ್ಯಗಳನ್ನು ಒದಗಿಸುವ ಮಾನದಂಡಗಳಿಗೆ ಸಂಬಂಧಿಸಿದ ಸಿಎಆರ್ ಅನ್ನು ಅದು ಅನುಸರಿಸುತ್ತಿಲ್ಲ ಎಂದು ಗೊತ್ತಾಗಿದೆ. ಈ ನಿಟ್ಟಿನಲ್ಲಿ ವಿಮಾನಯಾನ ಸಂಸ್ಥೆಗೆ ದಂಡ ಹಾಕಲಾಗಿದೆ ಎಂದು ಡಿಜಿಸಿಎ ಹೇಳಿದೆ.
ವಿಮಾನಗಳು ತಡವಾದಾಗ ಪ್ರಯಾಣಿಕರಿಗೆ ಹೋಟೆಲ್ ಸೌಕರ್ಯಗಳು, ಅಂತರರಾಷ್ಟ್ರೀಯ ವಿಮಾನಗಳಲ್ಲಿ ಆರಾಮದಾಯಕ ಆಸನಗಳನ್ನು ಪಡೆಯದ ಪ್ರಯಾಣಿಕರಿಗೆ ಪರಿಹಾರ ಮತ್ತು ಸಿಬ್ಬಂದಿಗೆ ಸರಿಯಾದ ತರಬೇತಿಗೆ ಸಂಬಂಧಿಸಿದ ಮಾನದಂಡಗಳಿಗೆ ಏರ್ ಇಂಡಿಯಾ ಗಮನ ನೀಡುತ್ತಿಲ್ಲ ಎಂಬ ಆರೋಪವಿದೆ.
ಇದನ್ನೂ ಓದಿ: ಏರ್ ಇಂಡಿಯಾ ಪ್ರಯಾಣಿಕರಿಗೆ ಬೆದರಿಕೆ: ಖಲಿಸ್ತಾನಿ ಉಗ್ರ ಪನ್ನುನ್ ವಿರುದ್ಧ ಪ್ರಕರಣ ದಾಖಲಿಸಿದ ಎನ್‌ಐಎ
DGCA ಅಧಿಕಾರಿ ಅಮಾನತು: ಭ್ರಷ್ಟಾಚಾರ ಆರೋಪದ ಮೇಲೆ ಡಿಜಿಸಿಎ ಅಧಿಕಾರಿ ಕ್ಯಾಪ್ಟನ್ ಅನಿಲ್ ಗಿಲ್ ವಿರುದ್ಧ ಶಿಸ್ತು ಕ್ರಮ ಜರುಗಿಸಲು ವಿಮಾನಯಾನ ನಿಯಂತ್ರಕರು ಚಿಂತನೆ ನಡೆಸುತ್ತಿರುವುದರಿಂದ ಅವರನ್ನು ಸರ್ಕಾರ ಬುಧವಾರ ಅಮಾನತುಗೊಳಿಸಿದೆ. ಕೇಂದ್ರ ನಾಗರಿಕ ಸೇವಾ ನಿಯಮಗಳ ಸೆಕ್ಷನ್ 10ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ಗಿಲ್ ಅವರು ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್‌ನಲ್ಲಿ (ಡಿಜಿಸಿಎ) ಏರೋಸ್ಪೋರ್ಟ್ಸ್ ನಿರ್ದೇಶನಾಲಯದಲ್ಲಿ ನಿರ್ದೇಶಕರಾಗಿದ್ದಾರೆ.
ಕ್ಯಾಪ್ಟನ್ ಅನಿಲ್ ಗಿಲ್ ವಿರುದ್ಧದ ಲಂಚದ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯಕ್ಕೆ (ಇಡಿ) ವರ್ಗಾಯಿಸಲು ವಾಯುಯಾನ ನಿಯಂತ್ರಕರು ಸಚಿವಾಲಯವನ್ನು ಸ್ಥಳಾಂತರಿಸಿದ ಕೆಲವೇ ದಿನಗಳ ನಂತರ ಮಹತ್ವದ ನಿರ್ಧಾರ ಹೊರಬಂದಿದೆ.