ಹೈದರಾಬಾದ್ : ದೇಶದಲ್ಲಿ ಕೊರೊನಾ 2ನೇ ಅಲೆ ಉತ್ತುಂಗದಲ್ಲಿದ್ದಾಗ ಸಾವನ್ನಪ್ಪಿದ ಸೋಂಕಿತರ ಶವಗಳು ಗಂಗಾನದಿಯಲ್ಲಿ ತೇಲಿ ಬಂದ ಬಗ್ಗೆ ವರದಿಯಾಗಿದ್ದವು. ಹೀಗೆ ನದಿಯಲ್ಲಿ ತೇಲಿ ಬಂದ ಹೆಣಗಳು 300ಕ್ಕೂ ಅಧಿಕ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.
ಗಂಗಾ ನದಿ ಅಭಿವೃದ್ಧಿ ಯೋಜನೆಯ ಅಧಿಕಾರಿ ರಾಜೀವ್ ರಂಜನ್ ಮಿಶ್ರಾ ಮತ್ತು ಭಾರತೀಯ ರಕ್ಷಣಾ ಇಲಾಖೆಯ ಅಧಿಕಾರಿ ಪುಸ್ಕಲ್ ಉಪಾಧ್ಯಾಯ ಅವರು ಬರೆದ ಗಂಗಾ : ರೀಇಮೇಜಿನಿಂಗ್, ರಿಜುವೆನೇಟಿಂಗ್, ರೀಕನೆಕ್ಟಿಂಗ್ ಪುಸ್ತಕದಲ್ಲಿ ಈ ವಿಷಯ ಪ್ರಸ್ತಾಪವಾಗಿದೆ.
ಪುಸ್ತಕದ ಅಧ್ಯಾಯವೊಂದರಲ್ಲಿ ಗಂಗಾನದಿಯಲ್ಲಿ ಶವಗಳು ತೇಲಿ ಬಂದ ಬಗ್ಗೆ ಉಲ್ಲೇಖವಾಗಿದೆ. ಉತ್ತರಪ್ರದೇಶ ಮತ್ತು ಬಿಹಾರದ ನದಿಯ ಘಟ್ಟ ಪ್ರದೇಶದಲ್ಲಿ ಕೋವಿಡ್ ಶವಗಳನ್ನು ಬಿಸಾಡಿದ್ದರು. ಆಯಾ ರಾಜ್ಯಗಳ ಗಂಗಾನದಿಯ ಉದ್ದಕ್ಕೂ ಶವಗಳು ತೇಲಿ ಬಂದಿವೆ. ಶವಗಳ ಅಂತ್ಯಕ್ರಿಯೆಗೆ ತಗುಲುವ ಅಧಿಕ ವೆಚ್ಚ ಮತ್ತು ಬಡತನ ಈ ರೀತಿ ಮಾಡಲು ಜನರನ್ನು ಪ್ರೇರೇಪಿಸಿದೆ ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.
ಉತ್ತರಪ್ರದೇಶದ ಕನೌಜ್‌ನಿಂದ ಅತಿ ಹೆಚ್ಚು ಶವಗಳು ನದಿಯಲ್ಲಿ ಬಂದಿವೆ. ಬಿಹಾರದಲ್ಲಿ ಗಂಗಾನದಿಯಲ್ಲಿ ತೇಲಿ ಬಂದ ಶವಗಳು ಉತ್ತರಪ್ರದೇಶಕ್ಕೆ ಸೇರಿದ್ದವು. ಬಿಹಾರದಲ್ಲಿ ಇಂತಹ ಪ್ರಕರಣಗಳು ವರದಿಯಾಗಿಲ್ಲ ಎಂದು ಪುಸ್ತಕದಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಆಫ್ಘಾನಿಸ್ತಾನದಲ್ಲಿ ಕೆಲಸ ಕಳೆದುಕೊಂಡ 6400 ಪತ್ರಕರ್ತರು.. ಇದು ತಾಲಿಬಾನಿಗಳ ಆಡಳಿತದ ನೈಜತೆ..
ಕೊರೊನಾ ಸಂಕಷ್ಟದಿಂದ ಅನೇಕ ಕುಟುಂಬಗಳು ಭಾರೀ ಸಮಸ್ಯೆಯನ್ನು ಎದುರಿಸುತ್ತಿವೆ. ವೈದ್ಯಕೀಯ ವೆಚ್ಚವನ್ನೂ ಪೂರೈಸಲಾಗದ ಸ್ಥಿತಿಯಲ್ಲಿವೆ. ಇದಲ್ಲದೆ, ಜನರ ಅಜ್ಞಾನ ಮತ್ತು ಸೋಂಕಿತ ವ್ಯಕ್ತಿಯ ಶವವನ್ನು ಹೇಗೆ ವಿಲೇವಾರಿ ಮಾಡಬೇಕು ಎಂಬ ಬಗ್ಗೆ ಮಾಹಿತಿ ಇಲ್ಲದೇ ಶವಗಳನ್ನು ನದಿಗೆ ಬಿಸಾಡಲಾಗುತ್ತಿತ್ತು ಎಂದು ಪುಸ್ತಕದಲ್ಲಿ ಹೇಳಲಾಗಿದೆ.