ರಿಷಿಕೇಶ್: ತನ್ನ ಬೇಡಿಕೆಯನ್ನು ಈಡೇರಿಸಿದ್ದಕ್ಕೆ ರಿಷಿಕೇಶದ ನೀಲಕಂಠ ಮಹಾದೇವ ದೇವಸ್ಥಾನಕ್ಕೆ ಭಕ್ತರೊಬ್ಬರು 300 ಕೆಜಿ ಲಡ್ಡುಗಳನ್ನು ಸಮರ್ಪಿಸಿದ್ದಾರೆ. ಇನ್ನು ಶಿವಲಿಂಗಕ್ಕೆ ಭಕ್ತ ನೀಡಿದ ಲಡ್ಡುಗಳಿಂದಲೇ ವಿಶೇಷ ಅಲಂಕಾರ ಮಾಡಲಾಗಿದೆ. ತಮ್ಮ ಬೇಡಿಕೆ ಪೂರೈಸಿದ ಶಿವನಿಗೆ ನೀಡಿದ 300 ಕೆಜಿ ಲಡ್ಡುಗಳನ್ನು ಪ್ರಸಾದ ರೂಪದಲ್ಲಿ ಭಕ್ತಾದಿಗಳಿಗೆ ವಿತರಿಸಲಾಗಿದೆ.
ಪ್ರತಿ ವರ್ಷ ಲಕ್ಷಾಂತರ ಶಿವ ಭಕ್ತರು ಪೌರಿ ಜಿಲ್ಲೆಯ ಯಮಕೇಶ್ವರ ಬ್ಲಾಕ್‌ನ ನೀಲಕಂಠ ಮಹಾದೇವ ದೇವಸ್ಥಾನಕ್ಕೆ ಭೇಟಿ ನೀಡ್ತಾರೆ..ಇಲ್ಲಿಗೆ ಬಂದು ಶಿವನಲ್ಲಿ ಬೇಡಿಕೊಂಡರೆ ತಮ್ಮ ಕೋರಿಕೆಗಳು ಈಡೇರುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಇಲ್ಲಿಗೆ ಬರುವ ಭಕ್ತರು ನಾನಾ ರೀತಿಯಲ್ಲಿ ಭೋಗ್ ಅಥವಾ ಹರಕೆ ಮಾಡಿಕೊಳ್ಳುತ್ತಾರೆ.
ನೀಲಕಂಠ ಮಹಾದೇವ ದೇವಸ್ಥಾನವು ರಿಷಿಕೇಶದ ಪ್ರಮುಖ ಧಾರ್ಮಿಕ ಪ್ರವಾಸಿ ತಾಣವಾಗಿದೆ. ಇದು ಉತ್ತರಾಖಂಡ್ನ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಈ ಸ್ಥಳದಲ್ಲಿ ಸಮುದ್ರದ ಮಂಥನದಿಂದ ಹೊರಬಂದ ವಿಷವನ್ನು ಶಿವನು ಕುಡಿದಾಗ ವಿಷವು ಅವನ ಹೊಟ್ಟೆಯನ್ನು ತಲುಪದಂತೆ ತಾಯಿ ಪಾರ್ವತಿ ಅವನ ಗಂಟಲನ್ನು ಒತ್ತಿ ಹಿಡಿದಳು.
ಆಗ ವಿಷ ಅವನ ಗಂಟಲಿನಲ್ಲಿ ಉಳಿಯಿತು ಎಂದು ಹೇಳಲಾಗುತ್ತದೆ. ನೀಲಕಂಠ ಮಹಾದೇವ ದೇವಾಲಯದ ಶಿಖರದ ಕೆಳಭಾಗದಲ್ಲಿ ಸಾಗರ ಮಂಥನದ ದೃಶ್ಯಗಳನ್ನು ಕೆತ್ತಲಾಗಿದೆ. ಬೆಟ್ಟದ ಮೇಲೆ ಪಾರ್ವತಿ ದೇವಿಯ ದೇವಾಲಯವಿದ್ದು ಸಾಗರೋಪಾದಿಯಲ್ಲಿ ಶಿವಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.