ಮುಂಬೈ (ಮಹಾರಾಷ್ಟ್ರ): ದೇಶದಲ್ಲಿ ಒಂದೆಡೆ ಕೋವಿಡ್ ಲಸಿಕೆ ಸಿಗುತ್ತಿಲ್ಲ, ಇನ್ನೊಂದೆಡೆ ಬ್ಲಾಕ್ ಫಂಗಸ್ ಅಥವಾ ಕಪ್ಪು ಶಿಲೀಂಧ್ರ (ಮ್ಯೂಕೋರ್ಮೈಕೋಸಿಸ್) ಚಿಕಿತ್ಸೆಗೆ ಔಷಧಿಗಳು ಲಭ್ಯವಿಲ್ಲದೆ ಸೋಂಕಿನಿಂದ ಚೇತರಿಸಿಕೊಂಡವರು ಸಾಯುತ್ತಿದ್ದಾರೆ.
ಮುಂಬೈನ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಭೈದಾಸ್ ಮಾಲಿ ಎಂಬುವರಿಗೆ ಒಂದಲ್ಲ, ಎರಡು ಬಾರಿ ಕೊರೊನಾ ತಗುಲಿತ್ತು. ಎರಡು ಬಾರಿಯೂ ಮಹಾಮಾರಿಯಿಂದ ಗುಣಮುಖರಾದರು. ಆದರೆ ಈಗ ಅವರಿಗೆ ಕಪ್ಪು ಶಿಲೀಂಧ್ರ ಅಂಟಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಇದನ್ನೂ ಓದಿ: ಬ್ಲಾಕ್ ಫಂಗಸ್ ಸಾಂಕ್ರಾಮಿಕ ರೋಗ: ರಾಜಸ್ಥಾನ ಸರ್ಕಾರದಿಂದ ಘೋಷಣೆ
ಇವರ ಚಿಕಿತ್ಸೆಗೆ ಒಟ್ಟು 40 ಲಕ್ಷ ರೂ. ಬೇಕಿದ್ದು, ಇಷ್ಟೊಂದು ಹಣ ಹೊಂದಿಸಲು ಅವರ ಕುಟುಂಬಕ್ಕೆ ಕಷ್ಟವಾಗಿತ್ತು. ಹೀಗಾಗಿ ಮಾಲಿ ಅವರ ಸಹೋದ್ಯೋಗಿಗಳು, ಸ್ನೇಹಿತರು 40 ಲಕ್ಷ ರೂ. ಹಣ ಒಟ್ಟುಮಾಡಿದ್ದಾರೆ. ಆದರೆ ಈಗ ಮ್ಯೂಕೋರ್ಮೈಕೋಸಿಸ್ ಚಿಕಿತ್ಸೆಗೆ ಬೇಕಾದ ನಿರ್ಣಾಯಕ ಔಷಧಿಗಳ ಕೊರತೆಯಿಂದಾಗಿ ವೈದ್ಯರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಮ್ಯೂಕೋರ್ಮೈಕೋಸಿಸ್ ಇದೊಂದು ಶಿಲೀಂಧ್ರ ಸೋಂಕಾಗಿದ್ದು, ಕೋವಿಡ್ನಿಂದ ಚೇತರಿಸಿಕೊಂಡ ಹಲವಾರು ವ್ಯಕ್ತಿಗಳು ಹೆಚ್ಚಾಗಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಕೋವಿಡ್-19 ಚಿಕಿತ್ಸೆಯ ಭಾಗವಾಗಿ ಸ್ಟೀರಾಯ್ಡ್‌ಗಳನ್ನು ತೆಗೆದುಕೊಳ್ಳುವ ರೋಗಿಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಅದರಲ್ಲಿಯೂ ವಿಶೇಷವಾಗಿ ಸೋಂಕಿನಿಂದ ಚೇತರಿಸಿಕೊಂಡ ಮಧುಮೇಹ ರೋಗಿಗಳಲ್ಲಿ ಇದು ರಕ್ತದ ಸಕ್ಕರೆಮಟ್ಟವನ್ನು ಹೆಚ್ಚಿಸುತ್ತದೆ.