ನವದೆಹಲಿ: ಶಾಸಕರು, ಸಚಿವರ ಸಂಬಳ ಹಾಗೂ ಭತ್ಯೆಗಳನ್ನು ಶೇ 66ರಷ್ಟು ಹೆಚ್ಚಿಸುವ ಮಸೂದೆಯನ್ನು ದೆಹಲಿ ವಿಧಾನಸಭೆ ಇತ್ತೀಚೆಗೆ ಪಾಸು ಮಾಡಿದೆ. ಆದರೆ ತೆಲಂಗಾಣ, ಹಿಮಾಚಲ ಪ್ರದೇಶ ರಾಜ್ಯಗಳಿಗೆ ಹೋಲಿಸಿದರೆ ದೆಹಲಿ ಶಾಸಕರ ಸಂಬಳ ಕಡಿಮೆಯಂತೆ. ಅಷ್ಟೇ ಅಲ್ಲದೆ ದೆಹಲಿ ಶಾಸಕರು ಈಗಲೂ ದೇಶದಲ್ಲಿ ಅತಿ ಕಡಿಮೆ ಸಂಬಳ ಪಡೆಯುವ ಜನಪ್ರತಿನಿಧಿಗಳಾಗಿದ್ದಾರೆ.
ಈ ಮುನ್ನ ದೆಹಲಿ ಶಾಸಕನೋರ್ವನ ಸಂಬಳ 12,000 ರೂಪಾಯಿಗಳಾಗಿತ್ತು. ಆದರೆ, ಈಗ ಹೊಸ ಮಸೂದೆಯು ರಾಷ್ಟ್ರಪತಿಗಳ ಅಂಕಿತ ಪಡೆದ ನಂತರ ಇವರ ಸಂಬಳ 30,000 ರೂಪಾಯಿಗಳಾಗಲಿದೆ. ಭತ್ಯೆಗಳನ್ನು ಸೇರಿಸಿದರೆ ಇದು ಈ ಮುಂಚೆ ಸಿಗುತ್ತಿದ್ದ 54,000 ರೂಪಾಯಿಗಳ ಬದಲಾಗಿ 90,000 ರೂಪಾಯಿಗಳಿಗೆ ಹೆಚ್ಚಾಗಬಹುದು.
ಸಚಿವರು, ಶಾಸಕರು, ಮುಖ್ಯ ವಿಪ್, ಸ್ಪೀಕರ್ ಮತ್ತು ಡೆಪ್ಯೂಟಿ ಸ್ಪೀಕರ್ ಅವರ ಸಂಬಳ ಹೆಚ್ಚಿಸಲು ದೆಹಲಿ ವಿಧಾನಸಭೆಯಲ್ಲಿ ಐದು ಪ್ರತ್ಯೇಕ ಮಸೂದೆಗಳನ್ನು ಪಾಸ್ ಮಾಡಲಾಗಿದೆ. ಈ ಮಸೂದೆಗಳನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಳುಹಿಸಲಾಗುತ್ತಿದೆ.
ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಪ್ರಸ್ತುತ ಶಾಸಕರು 12,000 ರೂಪಾಯಿಗಳ ಮಾಸಿಕ ವೇತನವನ್ನು ಪಡೆಯುತ್ತಾರೆ. ಹೊಸ ಮಸೂದೆಯು ರಾಷ್ಟ್ರಪತಿಗಳ ಅನುಮೋದನೆ ಪಡೆದ ನಂತರ ಇದು 30,000 ರೂಪಾಯಿಗಳಿಗೆ ಏರುತ್ತದೆ.
ಕ್ಷೇತ್ರದ ಭತ್ಯೆ 18,000 ರೂ.ನಿಂದ 25,000 ರೂ.ಗೆ ಏರಿಕೆಯಾಗಲಿದ್ದು, ಸಾರಿಗೆ ಭತ್ಯೆ 6,000 ರೂ.ನಿಂದ 10,000 ರೂ.ಗೆ ಏರಿಕೆಯಾಗಲಿದೆ.
ದೂರವಾಣಿ ಭತ್ಯೆ 8,000 ರೂ.ಗಳಿಂದ 10,000 ರೂ.ಗಳಿಗೆ ಏರಿಕೆಯಾಗಲಿದ್ದು, ಕಾರ್ಯದರ್ಶಿ ಭತ್ಯೆ 10,000 ರೂ.ಗಳಿಂದ 15,000 ರೂ.ಗಳಿಗೆ ಏರಿಕೆಯಾಗಲಿದೆ.
ಹಿಮಾಚಲ ಪ್ರದೇಶದ ಶಾಸಕರು 55,000 ರೂಪಾಯಿ ವೇತನ ಪಡೆಯುತ್ತಿದ್ದಾರೆ. ಅವರು ಕ್ಷೇತ್ರ ಭತ್ಯೆ, ದಿನಭತ್ಯೆ, ಕಾರ್ಯದರ್ಶಿ ಭತ್ಯೆ, ದೂರವಾಣಿ ಭತ್ಯೆಗಳು ಕ್ರಮವಾಗಿ 90,000, 1,800, 30,000, 15,000 ರೂ. ಆಗಿವೆ.
ಕೇರಳ ಶಾಸಕರ ವೇತನವು ದೆಹಲಿ ಶಾಸಕರಿಗಿಂತ ತುಂಬಾ ಕಡಿಮೆಯಾಗಿದೆ. ಅವರು ಕೇವಲ 2,000 ರೂ. ಸಂಬಳ ಪಡೆಯುತ್ತಿದ್ದಾರೆ. ಕೇರಳ ಶಾಸಕರಿಗೆ ಕಾರ್ಯದರ್ಶಿ ಭತ್ಯೆ ನೀಡಲಾಗುತ್ತಿಲ್ಲ. ಆದರೆ ಕ್ಷೇತ್ರ ಭತ್ಯೆಯು 25,000 ರೂ. ಗಳಾಗಿರುತ್ತದೆ.
ತೆಲಂಗಾಣ ಶಾಸಕರ ವೇತನ ರೂ 20,000 ಗಳಾಗಿದ್ದು, ಕ್ಷೇತ್ರ ಭತ್ಯೆ ರೂ. 2.3 ಲಕ್ಷದಷ್ಟಿದೆ. ಆದರೆ ಸರ್ಕಾರದಿಂದ ವಸತಿ ನೀಡದಿದ್ದಲ್ಲಿ ವಸತಿ ಭತ್ಯೆ ಪಾವತಿಸಲಾಗುತ್ತದೆ.
ಆಂಧ್ರಪ್ರದೇಶ, ತಮಿಳುನಾಡು, ಉತ್ತರಾಖಂಡ, ಛತ್ತೀಸ್‌ಗಢ, ಮಿಜೋರಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಶಾಸಕರ ವೇತನಗಳು ಕ್ರಮವಾಗಿ ರೂ. 12,000, ರೂ. 30,000, ರೂ. 20,000, ರೂ. 25,000, ರೂ. 80,000 ಮತ್ತು ರೂ. 10,000 ಆಗಿವೆ.
ಆಂಧ್ರಪ್ರದೇಶದ ಶಾಸಕರ ಕ್ಷೇತ್ರ ಭತ್ಯೆ 1.13 ಲಕ್ಷ ರೂಪಾಯಿಗಳಾಗಿದ್ದರೆ, ತಮಿಳುನಾಡು, ಉತ್ತರಾಖಂಡ, ಛತ್ತೀಸ್‌ಗಢ, ಪಂಜಾಬ್, ಮಿಜೋರಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯ ಶಾಸಕರ ಕ್ಷೇತ್ರ ಭತ್ಯೆಗಳು ಕ್ರಮವಾಗಿ 25,000, 1.5 ಲಕ್ಷ, 30,000, 25,000, 40,000 ಮತ್ತು 4,000 ರೂ. ಆಗಿವೆ.
ಛತ್ತೀಸ್‌ಗಢದ ಶಾಸಕರು 15,000 ರೂ.ಗಳ ಆರ್ಡರ್ಲಿ ಭತ್ಯೆ, 10,000 ರೂ.ಗಳ ವೈದ್ಯಕೀಯ ಭತ್ಯೆಗಳನ್ನು ಸಹ ಪಡೆಯುತ್ತಾರೆ. ಅಂದಹಾಗೆ, ಉತ್ತರಾಖಂಡದ ಶಾಸಕರ ಸಂಚಿತ ವೇತನವು 1.82 ಲಕ್ಷ ರೂ.ಗಿಂತ ಹೆಚ್ಚಾಗಿದೆ.
ದೆಹಲಿ ಶಾಸಕರ ವೇತನ ಮತ್ತು ಭತ್ಯೆಗಳನ್ನು ಕೊನೆಯದಾಗಿ 2011 ರಲ್ಲಿ ಹೆಚ್ಚಿಸಲಾಗಿತ್ತು.