ಲಕ್ನೋ: ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಮಾಡಿದ ಒಂದು ಲೈನ್ನ ಟ್ವೀಟ್ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಸರ್ಕಾರಕ್ಕಿಂತ ಸಂಘಟನೆ ದೊಡ್ಡದು ಎಂದು ಮೌರ್ಯ ಟ್ವೀಟ್ ಮಾಡಿದ್ದರು. ಟ್ವೀಟ್ನಲ್ಲಿ ಯಾವುದೇ ನಿರ್ದಿಷ್ಟ ಘಟನೆಯ ಬಗ್ಗೆ ಪ್ರಸ್ತಾಪವಿಲ್ಲದಿದ್ದರೂ, ಮೌರ್ಯ ಇತ್ತೀಚೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿರುವುದರಿಂದ ಈ ಟ್ವೀಟ್ಗೆ ಅನೇಕ ಅರ್ಥಗಳನ್ನು ಕಲ್ಪಿಸಲಾಗುತ್ತಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರನ್ನು ನೇಮಿಸುವ ಪ್ರಕ್ರಿಯೆಗಳು ನಡೆದಿರುವ ಬೆನ್ನಲ್ಲೇ ಈ ಟ್ವೀಟ್ ಮಾಡಲಾಗಿದೆ. ಮೌರ್ಯ ಅವರ ಹೆಸರನ್ನು ರಾಜ್ಯಾಧ್ಯಕ್ಷರ ಹುದ್ದೆಗೆ ಶಾರ್ಟ್‌ಲಿಸ್ಟ್ ಮಾಡಲಾಗಿದೆ ಎಂದು ಟ್ವೀಟ್‌ನಿಂದ ಕಂಡು ಗೊತ್ತಾಗುತ್ತಿದೆ ಎಂದು ಪಕ್ಷದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಭಾವಿ ಒಬಿಸಿ ನಾಯಕ ಮೌರ್ಯ ಅವರು 2017 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಉತ್ತರ ಪ್ರದೇಶ ಬಿಜೆಪಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.
ಇತ್ತೀಚೆಗಷ್ಟೇ ಅವರನ್ನು ಸ್ವತಂತ್ರ ದೇವ್ ಸಿಂಗ್ ಬದಲಿಗೆ ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸಲಾಯಿತು. ಉತ್ತರ ಪ್ರದೇಶ ಕ್ಯಾಬಿನೆಟ್‌ನಲ್ಲಿ ಸಚಿವರಾಗಿದ್ದ ಸಿಂಗ್, ಈ ಹಿಂದೆ ರಾಜ್ಯ ಬಿಜೆಪಿ ಮುಖ್ಯಸ್ಥನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.