ನವದೆಹಲಿ: ರಾಜಧಾನಿ ದೆಹಲಿಯಲ್ಲಿ ವಿಪರೀತ ಚಳಿಯ ಹವಾಗುಣ ಮುಂದುವರೆದಿದೆ. ಇಂದು ಬೆಳಗ್ಗೆ ದಟ್ಟವಾದ ಮಂಜು ಕವಿದಿತ್ತು. ಮಂಜಿನಿಂದಾಗಿ ಗೋಚರತೆ ಗಣನೀಯವಾಗಿ ಕಡಿಮೆಯಾಗಿದೆ. ಚಳಿಯಿಂದ ಪಾರಾಗಲು ಜನರು ಬೆಂಕಿಯನ್ನು ಆಶ್ರಯಿಸುತ್ತಿದ್ದರು. ಜನವರಿ 8ರ ಬೆಳಗ್ಗೆಯಿಂದ ಈ ಋತುವಿನಲ್ಲಿ ರಾಜಧಾನಿಯಲ್ಲಿ ಅತ್ಯಂತ ಹೆಚ್ಚು ಚಳಿಯ ಪ್ರಮಾಣ ದಾಖಲಾಗಿದೆ. ಸದ್ಯದ ಸರಾಸರಿ ಕನಿಷ್ಠ ತಾಪಮಾನವು 1.9 ಡಿಗ್ರಿಯಷ್ಟಿದೆ. ಸಾಮಾನ್ಯಕ್ಕಿಂತ ಇದು ಐದು ಪಟ್ಟು ಕಡಿಮೆ ಎಂದೇ ಹೇಳಬಹುದು. ನವದೆಹಲಿಯ ಕನಿಷ್ಠ ತಾಪಮಾನವು ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಹೆಚ್ಚಿನ ಸ್ಥಳಗಳಿಗಿಂತ ಸತತವಾಗಿ ನಾಲ್ಕನೇ ದಿನವೂ ಕಡಿಮೆಯಾಗಿದೆ. ಆದರೆ, ರಾಜಸ್ಥಾನದ ಚುರು ಎಂಬಲ್ಲಿ ಕನಿಷ್ಠ ಮೈನಸ್ 0.5 ಡಿಗ್ರಿ ಸೆಲ್ಸಿಯಸ್ ತಾಪ ಕಂಡುಬಂದಿದೆ.
ದೆಹಲಿ ಶಾಲೆಗಳಿಗೆ ಚಳಿಗಾಲದ ರಜೆ ವಿಸ್ತರಣೆ: ಉತ್ತರ ಭಾರತವನ್ನು ಚಳಿ ಬಿಡುವಂತೆ ಕಾಣುತ್ತಿಲ್ಲ. ಕಳೆದ ನಾಲ್ಕು ದಿನಗಳಿಂದ ದಾಖಲಾಗುತ್ತಿರುವ ಕನಿಷ್ಠ ತಾಪಮಾನದ ಸರಣಿ ಭಾನುವಾರವೂ ಮುಂದುವರಿದಿದೆ. ದೆಹಲಿಯಲ್ಲಿ ಕನಿಷ್ಠ ತಾಪಮಾನ 1.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು ಕಳೆದೆರಡು ವರ್ಷಗಳಲ್ಲಿ ಜನವರಿ ತಿಂಗಳಲ್ಲಿ ದಾಖಲಾದ ಕನಿಷ್ಠ ತಾಪಮಾನವಾಗಿದೆ. ಹೀಗಾಗಿ, ದೆಹಲಿ ಸರ್ಕಾರವು ಶಾಲೆಗಳ ಚಳಿಗಾಲದ ರಜೆಯನ್ನು ಜನವರಿ 15 ರವರೆಗೆ ವಿಸ್ತರಿಸಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ದೆಹಲಿ ಮತ್ತು ಉತ್ತರ ಭಾರತದ ಇತರ ಭಾಗಗಳಿಗೆ ಆರೆಂಜ್ ಅಲರ್ಟ್ ನೀಡಿದೆ. ಮುಂದಿನ 48 ಗಂಟೆಗಳ ಕಾಲ ಇದೇ ರೀತಿ ತಾಪಮಾನ ಮುಂದುವರಿಯಲಿದೆ ಎಂದು ಐಎಂಡಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಕನಿಷ್ಠ ತಾಪಮಾನವು ಸಾಮಾನ್ಯ ಐದು ಡಿಗ್ರಿಗಿಂತ ಕಡಿಮೆಯಿದ್ದರೆ ಅದನ್ನು ತೀವ್ರ ಶೀತ ತರಂಗ ಎಂದು ವರ್ಗೀಕರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ದೇಶದ ಹಲವು ಭಾಗಗಳಲ್ಲಿ 48 ಗಂಟೆಗಳ ಕಾಲ ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಿಸಿದೆ. ಹವಾಮಾನ ಇಲಾಖೆ ಪ್ರಕಾರ, ಒಂದೆರೆಡು ದಿನ ಇದೇ ವಾತಾವರಣ ಇರಲಿದೆ. ಸೋಮವಾರ ಬೆಳಗ್ಗೆಯೂ ದಟ್ಟ ಮಂಜು ಕವಿದಿರುತ್ತದೆ. ಜನವರಿ 11 ರಿಂದ 13 ರ ನಡುವೆ ಗಾಳಿಯ ದಿಕ್ಕು ಬದಲಾದರೆ ಶೀತದಿಂದ ಸ್ವಲ್ಪ ಪರಿಹಾರ ಪಡೆಯಬಹುದು ಎಂದು ತಿಳಿಸಿದೆ.
ಭಾನುವಾರ ದೇಶದ ವಿವಿಧ ರೈಲ್ವೇ ವಲಯಗಳಲ್ಲಿ ಮಂಜಿನ ಸಮಸ್ಯೆಯಿಂದ 48ಕ್ಕೂ ಹೆಚ್ಚು ರೈಲುಗಳ ಸಂಚಾರಕ್ಕೆ ತೊಂದರೆಯಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಇದರಲ್ಲಿ 38 ರೈಲುಗಳು ತಡವಾಗಿ ಚಲಿಸಿವೆ. ಹಲವು ರೈಲುಗಳು ರದ್ದಾಗಿವೆ. 31 ರೈಲುಗಳನ್ನು ಬೇರೆಡೆಗೆ ಮಾರ್ಗ ಬದಲಾಯಿಸಲಾಗಿದೆ. 33 ರೈಲುಗಳನ್ನು ಸ್ಥಳದಲ್ಲೇ ನಿಲ್ಲಿಸಲಾಗಿದೆ ಎಂದು ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಿಮದಿಂದ ವಿಮಾನ ಸೇವೆಗಳು ಕೂಡ ಸ್ಥಗಿತಗೊಂಡಿವೆ. ಸುಮಾರು 25 ವಿಮಾನಗಳು ವಿಳಂಬವಾಗಿವೆ ಎಂದು ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ನಿನ್ನೆ ತಿಳಿಸಿದ್ದರು.
ಇದನ್ನೂ ಓದಿ: ಕೊರೆವ ಚಳಿ ಮೀರಿ ಬರಿ ಮೈಯಲ್ಲಿ ಭಾರತ್ ಜೋಡೋ ಯಾತ್ರೆ: ವಿಡಿಯೋ