ನವದೆಹಲಿ: ಪ್ರತಿಕೂಲ ಹವಾಮಾನದ ಜೊತೆಗೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಿಡಿಸಲಾದ ಪಟಾಕಿ ಮತ್ತು ತ್ಯಾಜ್ಯ ದಹನದಿಂದಾಗಿ ದೆಹಲಿಯ ದೆಹಲಿಯ ಗಾಳಿ ಗುಣಮಟ್ಟ ಅತ್ಯಂತ ಕಳಪೆ ಮಟ್ಟಕ್ಕೆ ಇಳಿಕೆಯಾಗಿದೆ ಎಂದು ವರದಿಯಾಗಿದೆ. ಸ್ವಿಟ್ಜರ್ಲೆಂಡ್‌ನ AQI ಪ್ರಕಾರ ರಾಜಧಾನಿ ಇದೀಗ ವಿಶ್ವದ ಅತ್ಯಂತ ಕಲುಷಿತ ನಗರವಾಗಿ ಗುರುತಿಸಿಕೊಂಡಿದೆ. IQAir ನಿಂದ ಅಳೆಯಲಾದ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ ದೆಹಲಿ ಪಾಕಿಸ್ತಾನದ ಲಾಹೋರ್ನ ನಂತರದ ಸ್ಥಾನದಲ್ಲಿದೆ.
ಕಳೆದ 24 ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯುಐ) 312 ಇದ್ದರೂ, ಕಳೆದ ಏಳು ವರ್ಷಗಳ ದೀಪಾವಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ವಾಯು ಗುಣಮಟ್ಟ ಎನಿಸಿಕೊಂಡಿದೆ. ಇದಕ್ಕಿಂತಲೂ ಹಿಂದೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಂಕಿಅಂಶಗಳ ಪ್ರಕಾರ 2018ರ ದೀಪಾವಳಿ ಸಮಯಕ್ಕೆ (ಎಕ್ಯುಐ) 281 ದಾಖಲಿಸಿತ್ತು. ಕಳೆದ ವರ್ಷ (ಎಕ್ಯುಐ) 382, 2020ರಲ್ಲಿ 414, 2019ರಲ್ಲಿ 337, 2017ರಲ್ಲಿ 319, 2016ರಲ್ಲಿ 431 ವರದಿಯಾಗಿತ್ತು.
ನೆರೆಯ ನಗರಗಳಾದ ಗಾಜಿಯಾಬಾದ್ (301), ನೋಯ್ಡಾ (303), ಗ್ರೇಟರ್ ನೋಯ್ಡಾ (270), ಗುರುಗ್ರಾಮ್ (325) ಮತ್ತು ಫರಿದಾಬಾದ್ (256) ಕಳಪೆ ಗಾಳಿಯ ಗುಣಮಟ್ಟವನ್ನು ವರದಿಯಾಗಿದೆ. ಶೂನ್ಯ ಮತ್ತು 50 ರ ನಡುವಿನ AQI ಅನ್ನು ಉತ್ತಮ, 51 ಮತ್ತು 100 ತೃಪ್ತಿದಾಯಕ, 101 ಮತ್ತು 200 ಮಧ್ಯಮ, 201 ಮತ್ತು 300 ಕಳಪೆ, 301 ಮತ್ತು 400 ಅತ್ಯಂತ ಕಳಪೆ ಮತ್ತು 401 ಮತ್ತು 500 ತೀವ್ರ ಎಂದು ಪರಿಗಣಿಸಲಾಗುತ್ತದೆ.
ಕಳೆದ ವರ್ಷದಂತೆ ಪಟಾಕಿ ಸಿಡಿಸಿದರೆ, ದೀಪಾವಳಿಯ ರಾತ್ರಿಯೇ ಗಾಳಿಯ ಗುಣಮಟ್ಟ ತೀವ್ರ ಮಟ್ಟಕ್ಕೆ ಕುಸಿಯಬಹುದು ಮತ್ತು ಇನ್ನೊಂದು ದಿನ ಕೆಂಪು ವಲಯದಲ್ಲಿ ಉಳಿಯಬಹುದು ಎಂದು ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆಯ ವ್ಯವಸ್ಥೆ ( SAFAR) ಭವಿಷ್ಯ ನುಡಿದಿತ್ತು.