ಒಂದು ವರ್ಷದ ಹಿಂದೆ ಈಶಾನ್ಯ ದೆಹಲಿಯಲ್ಲಿ ಕೋಮು ಹತ್ಯೆಯ ಭೀಕರತೆಯನ್ನು ನೋಡಿ ದೇಶವು ಆಘಾತಕ್ಕೊಳಗಾಗಿತ್ತು. 1984 ರಲ್ಲಿ ದೆಹಲಿಯಲ್ಲಿ ನಡೆದ ಸಿಖ್ ವಿರೋಧಿ ಗಲಭೆಯ ನಂತರ ನಡೆದ ಘಟನೆ ಇದು ಎಂದೇ ಹೆಸರಾಗಿದೆ.
ಸಿಎಎ ಪರ ಮತ್ತು ಸಿಎಎ ವಿರೋಧಿ ಗುಂಪುಗಳ ನಡುವಿನ ಘರ್ಷಣೆ ಕೋಮು ಗಲಭೆಯಾಗಿ ಬದಲಾಗಿ ಭಾರೀ ಅನಾಹುತವನ್ನೇ ಉಂಟು ಮಾಡಿತ್ತು. ಆರು ದಿನಗಳ ಕಾಲ ನಡೆದ ಗಲಭೆಯಲ್ಲಿ ಒಟ್ಟು 53 ಜನರು ಸಾವಿಗೀಡಾದರು. 581 ಮಂದಿ ಗಾಯಗೊಂಡರು. ಖಜುರು ಖಾಸ್, ಭಜನ್‌ಪುರ ನಗರ, ಗೋಕಲ್‌ಪುರಿ, ಜಾಫ್ರಾಬಾದ್ ಮತ್ತು ದಯಾಲ್‌ಪುರದಂತಹ ಪ್ರದೇಶಗಳು ಹಿಂಸಾಚಾರದಿಂದ ಹೆಚ್ಚು ಹೆಸರಾದವು.
ಅಂದು ದೆಹಲಿಯ ಜಾತ್ಯಾತೀತ ಜಾಗದಲ್ಲಿ ದಂಗೆಕೋರರು ಹಗಲು ಹೊತ್ತಲ್ಲೇ ತಮ್ಮ ವಿಕೃತಿ ಮೆರೆದರು. ಹಿಂಸಾಚಾರದ ಭೀಕರತೆ ಹೆಚ್ಚಾಗುತ್ತಿದ್ದಂತೆ ಮುಗ್ಧ ಮನಸ್ಸುಗಳ ಸಹಾಯದ ಕೂಗು ಕಿವುಡರ (ಸರ್ಕಾರದ) ಕಿವಿಗೆ ಬಿದ್ದಿತಾದರೂ ಯಾವ ಪ್ರಯೋಜನ ಆಗಲಿಲ್ಲ.
ಭುಗಿಲೆದ್ದ ವಾತಾವರಣ : ಕೋಮು ಗಲಭೆಯಾಗಿ ಉಲ್ಬಣಗೊಂಡಿದ್ದರಿಂದ ಈಗಾಗಲೇ ಆವೇಶಗೊಂಡ ವಾತಾವರಣ ಭುಗಿಲೆದ್ದಿತು. ಈ ಹಿನ್ನೆಲೆ ಆಡಳಿತ ವ್ಯವಸ್ಥೆ ಇದನ್ನು ನಿಯಂತ್ರಣಕ್ಕೆ ತರಲು ವಿಫಲವಾಯಿತು. ಲೋಕನೀತಿ, ಕೇಂದ್ರದ 2019ರ ವರದಿಯ ಪ್ರಕಾರ, ದೆಹಲಿ ಪೊಲೀಸರ ಸಿಬ್ಬಂದಿ ವಿಷಯಕ್ಕೆ ಬಂದಾಗ ಇಡೀ ದೇಶದಲ್ಲಿ ಅತ್ಯುತ್ತಮ. ಆದರೆ, ಜನರನ್ನು ರಕ್ಷಿಸುವ ಕರ್ತವ್ಯದಲ್ಲಿ ವಿಫಲವಾಯಿತು. 1 ಮಿಲಿಯನ್ ಅರೆಸೈನಿಕ ಪಡೆಗಳನ್ನು ಹೊಂದಿರುವ ಗೃಹ ಸಚಿವಾಲಯವು ಕೂಡ ಅಂದಿನ ಪರಿಸ್ಥಿತಿಗೆ ಸ್ಪಂದಿಸುವಲ್ಲಿ ವಿಫಲವಾಯಿತು.
ಗುಪ್ತಚರ ದಳ ಕೂಡ ಪರಿಸ್ಥಿತಿಯನ್ನು ಮುಂಚೆಯೇ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ. ಬಂದೂಕುಗಳು ಮತ್ತು ಪೆಟ್ರೋಲ್ ಬಾಂಬ್‌ಗಳು ಪೂರ್ವ ಹಾಗೂ ಕೆಟ್ಟ ಯೋಜನೆಯಂತೆ ದಂಗೆಕೋರರ ಕಡೆಯಿಂದ ತೂರಿ ಬಂದವು. ಇದಕ್ಕೆ ಆಡಳಿತವು ಸರಿಯಾದ ರೀತಿ ತಕ್ಕ ಉತ್ತರ ನೀಡಲಿಲ್ಲ.
ದೆಹಲಿ ಪೊಲೀಸರ ಪ್ರಕಾರ 400 ಪ್ರಕರಣಗಳಲ್ಲಿ ಈವರೆಗೆ 1825 ಜನರನ್ನು ಬಂಧಿಸಲಾಗಿದೆ. ಒಟ್ಟು 755 ಎಫ್‌ಐಆರ್‌ಗಳನ್ನು ದೆಹಲಿ ಪೊಲೀಸರು ದಾಖಲಿಸಿದ್ದಾರೆ. 349 ಪ್ರಕರಣಗಳಲ್ಲಿ ಚಾರ್ಜ್‌ಶೀಟ್‌ಗಳನ್ನು ದಾಖಲಿಸಲಾಗಿದೆ. ನಗರದ ಮೇಲಿನ ಈ ಹತ್ಯಾಕಾಂಡದ ದುಷ್ಕರ್ಮಿಗಳಿಗೆ ಶಿಕ್ಷೆ ಕೊಡಿಸುವುದು ರಾಜ್ಯದ ಮುಖ್ಯ ಉದ್ದೇಶವಾದರೂ ಕೂಡ ಅನೇಕ ಗಲಭೆ ಪ್ರಕರಣದ ನ್ಯಾಯದಾನದಂತೆ ಇದರಲ್ಲೂ ಹಲವರು ವಿಮುಖರಾಗುತ್ತಿದ್ದಾರೆ. 1984ರ ಸಿಖ್ ವಿರೋಧಿ ಗಲಭೆಗೆ ಬಲಿಯಾದವರಲ್ಲಿ ಅನೇಕರು ಇನ್ನೂ ಕೂಡ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ.
ಪ್ರಮುಖ ವಿಷಯ ಎಂದರೆ ಸಾಮಾಜಿಕ ಮಾಧ್ಯಮಗಳ ಪಾತ್ರವೂ ಕೂಡ ಈಗ ಪರಿಶೀಲನೆಗೆ ಒಳಪಟ್ಟಿದೆ. ಅಲ್ಲಿ ಬರೆಯಲಾಗುವ ವದಂತಿಗಳನ್ನು ಕೆಲವೇ ಸಮಯಗಳಲ್ಲಿ ಹಂಚಿಕೊಳ್ಳುವುದರ ಮೂಲಕ, ಸ್ಥಳೀಯ ವಿವಾದವನ್ನು ನಿಭಾಯಿಸಲೂಬಹುದು ಹಾಗೆ ಕೋಮು ಬಣ್ಣವನ್ನೂ ನೀಡಬಹುದು.
ಆರೋಪಿಗಳಿಗೆ ಶಿಕ್ಷೆಯಾಗಬೇಕು : ದೆಹಲಿ ಸರ್ಕಾರದ ಪ್ರಕಾರ, 2,221 ಗಲಭೆ ಸಂತ್ರಸ್ತರಿಗೆ ಪರಿಹಾರವಾಗಿ 26 ಕೋಟಿ ರೂ. ವಿತರಿಸಲಾಗಿದೆ. ಆದರೆ, ಸಂತ್ರಸ್ತರಿಗೆ ಸರ್ಕಾರವು ಹೆಚ್ಚಿನದನ್ನು ಮಾಡಬೇಕಾಗಿದೆ. ಈ ಬುದ್ಧಿಹೀನ ಹಿಂಸಾಚಾರದ ದುಷ್ಕರ್ಮಿಗಳು ಮತ್ತು ಪ್ರಚೋದಕರನ್ನು ಸಾಧ್ಯವಾದಷ್ಟು ಬೇಗ ನ್ಯಾಯಾಲಯದ ಕೆಳಗೆ ತಂದು ಶಿಕ್ಷೆ ನೀಡುವ ಬಗ್ಗೆ ಸರ್ಕಾರಗಳು ಖಚಿತಪಡಿಸಿಕೊಳ್ಳಬೇಕಿದೆ.
ಸ್ವಾತಂತ್ರ್ಯದ ನಂತರ ಭಾರತವು 1969ರ ಅಹಮದಾಬಾದ್ ಗಲಭೆಯಿಂದ 2020ರ ದೆಹಲಿ ಗಲಭೆಗಳಿಗೆ ಸಾಕ್ಷಿಯಾಗಿದೆ. ಆದರೆ, ಭಾರತೀಯ ಸಮಾಜವು ಸವಾಲುಗಳಿಗೆ ವೇಗವಾಗಿ ಸ್ಪಂದಿಸಿ ಮೊದಲಿಗಿಂತ ಬಲವಾಗಿ ಹೊರ ಹೊಮ್ಮುತ್ತಿದೆ. ಇದು ನಮ್ಮ ಜಾತ್ಯಾತೀತ ಭಾರತದ ಸೌಂದರ್ಯ.
ದೆಹಲಿಯಲ್ಲಿಯೂ ಸಹ ಎರಡೂ ಧರ್ಮದ ಜನರು ನಿರ್ಣಾಯಕ ಪರಿಸ್ಥಿತಿಯಲ್ಲಿಯೂ ಪರಸ್ಪರ ಸಹಾಯ ಮಾಡಿದ ಉದಾಹರಣೆಗಳಿವೆ. ಆದರೆ, ಭಾರತದ ಜಾತ್ಯಾತೀತ ಬಟ್ಟೆಯನ್ನು ಹರಿಯದಂತೆ ನೋಡಿಕೊಳ್ಳಲು ಸರ್ಕಾರ, ನಾಗರಿಕ ಸಮಾಜ, ಪೊಲೀಸ್ ಮತ್ತು ನ್ಯಾಯಾಂಗ ಮತ್ತು ಮಾಧ್ಯಮಗಳು ತಮ್ಮದೇ ಆದ ಕೆಲಸ ಮಾಡಬೇಕಿದೆ.