ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಿದ್ದರೂ ಶಾಲೆಗಳನ್ನು ಪುನರಾರಂಭಿಸಿದಕ್ಕಾಗಿ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ನಾಳೆಯಿಂದ ಮತ್ತೆ ತರಗತಿಗಳನ್ನು ನಡೆಸುವುದಿಲ್ಲ ಎಂದು ದೆಹಲಿ ಸರ್ಕಾರವನ್ನು ತಿಳಿಸಿದೆ.
ವಾಯು ಮಾಲಿನ್ಯ ಮಟ್ಟವು ಸುಧಾರಿಸುತ್ತಿರುವ ಕಾರಣ ನಾವು ಶಾಲೆಗಳು ಪುನಃ ತೆರೆಯುವ ನಿರ್ಧಾರ ಕೈಗೊಂಡೆವು. ಮುಂದಿನ ಆದೇಶದ ವರೆಗೆ ನಾಳೆಯಿಂದ ಮತ್ತೆ ಶಾಲೆಗಳನ್ನು ಮುಚ್ಚಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ.
ದೀಪಾವಳಿ ಹಬ್ಬದ ಬಳಿಕ ದೆಹಲಿಯಲ್ಲಿ ವಾಯು ಗುಣಮಟ್ಟ ಕಳಪೆಯಾಯಿತು. ಹೀಗಾಗಿ ನವೆಂಬರ್ 13ರಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮುಂದಿನ ಕೆಲ ದಿನಗಳ ವರೆಗೆ ಶಾಲೆಗಳನ್ನು ಮುಚ್ಚವುದಾಗಿ ಹಾಗೂ ಸರ್ಕಾರಿ ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡಬೇಕೆಂದು ಘೋಷಿಸಿದ್ದರು. ನವೆಂಬರ್ 29ರಿಂದ ಮತ್ತೆ ಶಾಲೆಗಳನ್ನು ಆರಂಭಿಸಲಾಗಿತ್ತು.
ಇದನ್ನೂ ಓದಿ: ದೆಹಲಿ ವಾಯು ಮಾಲಿನ್ಯ ಹೆಚ್ಚಳಕ್ಕೆ ಸುಪ್ರೀಂಕೋರ್ಟ್ ಕೆಂಡಾಮಂಡಲ
ಇಂದು ದೆಹಲಿ ಸರ್ಕಾರದ ನಿರ್ಧಾರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ದೊಡ್ಡವರಿಗೆ ವರ್ಕ್ ಫ್ರಮ್ ಹೋಮ್ ಜಾರಿಗೊಳಿಸಿರುವಾಗ ಮಕ್ಕಳನ್ನು ಯಾಕೆ ಶಾಲೆಗೆ ಹೋಗಲು ಒತ್ತಾಯಿಸಲಾಗುತ್ತಿದೆ ಎಂದು ಪ್ರಶ್ನಿಸಿದೆ. ಅಲ್ಲದೇ ವಾಯು ಮಾಲಿನ್ಯ ನಿಯಂತ್ರಣ ಕ್ರಮಗಳ ಅನುಷ್ಠಾನಕ್ಕೆ ಗಂಭೀರ ಯೋಜನೆ ರೂಪಿಸಲು ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ 24 ಗಂಟೆಗಳ ಗಡುವು ನೀಡಿತ್ತು. ಇದರ ಬೆನ್ನಲ್ಲೇ ಈಗ ದೆಹಲಿ ಸಚಿವರು ಶಾಲೆಗಳನ್ನು ನಾಳೆಯಿಂದ ಮುಚ್ಚುವುದಾಗಿ ತಿಳಿಸಿದ್ದಾರೆ.