ನವದೆಹಲಿ: ತಾರಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ, ಭಾರತ ಕುಸ್ತಿ ಫೆಡರೇಷನ್ ಮಾಜಿ ಮುಖ್ಯಸ್ಥ(ಡಬ್ಲ್ಯುಎಫ್‌ಐ) ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದೆಹಲಿ ಪೊಲೀಸರು ಇಲ್ಲಿನ ರೌಸ್ ಅವೆನ್ಯೂ ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರಗಳ ಹೇಳಿಕೆ, ಡಿಜಿಟಲ್ ದಾಖಲೆಗಳುಳ್ಳ ಆರೋಪಪಟ್ಟಿ ಸಲ್ಲಿಸಿದ್ದಾರೆ.
ದೆಹಲಿ ಪೊಲೀಸರನ್ನು ಪ್ರತಿನಿಧಿಸುವ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ಅವರು ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದು, ರೌಸ್ ಅವೆನ್ಯೂ ಕೋರ್ಟ್ನ ಎಸಿಎಂಎಂ ದೀಪಕ್ ಕುಮಾರ್ ಅವರು ಗಮನಿಸುತ್ತಿದ್ದಾರೆ. ಡಬ್ಲ್ಯುಎಫ್‌ಐ ಮಾಜಿ ಮುಖ್ಯಸ್ಥರ ವಿರುದ್ಧ ಐಪಿಸಿ ಸೆಕ್ಷನ್ 354, 354D, 354A ಅಡಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ರದ್ದತಿ ವರದಿಯೂ ಸಲ್ಲಿಕೆ: ಇದೇ ವೇಳೆ, ಸಂತ್ರಸ್ತೆ ಮತ್ತು ಆಕೆಯ ತಂದೆಯ ಹೇಳಿಕೆಯ ಆಧಾರದ ಮೇಲೆ ದೆಹಲಿ ಪೊಲೀಸರು ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಇಲ್ಲಿನ ಪಟಿಯಾಲ ನ್ಯಾಯಾಲಯಕ್ಕೆ ರದ್ದತಿ ವರದಿಯನ್ನು ಸಲ್ಲಿಸಿದ್ದಾರೆ.
WFI ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ಅವರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ರದ್ದತಿ ವರದಿಯನ್ನು ಪಟಿಯಾಲ ಹೌಸ್ ಕೋರ್ಟ್‌ಗೆ ಸಲ್ಲಿಸಿದ್ದಾರೆ. ಇದೇ ವೇಳೆ ಇದರ ಮುಂದಿನ ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಲಾಗಿದೆ.
ಆರೋಪ ಸಾಬೀತಾದರೆ ನೇಣು ಹಾಕಿಕೊಳ್ಳುವೆ ಎಂದಿರುವ ಬ್ರಿಜ್ ಭೂಷಣ್: ಅಪ್ರಾಪ್ತೆ ಕುಸ್ತಿ ಪಟುವಿನ ಆರೋಪದಲ್ಲಿ ಯಾವುದೇ ಪುರಾವೆಗಳಿಲ್ಲ ಎಂದು ಪೊಲೀಸ್ ವರದಿಯಲ್ಲಿ ಹೇಳಿದೆ. ಏಪ್ರಿಲ್ 28 ರಂದು ದೆಹಲಿ ಪೊಲೀಸರು ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಸಿಂಗ್ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು. ಆದರೆ, WFI ಮುಖ್ಯಸ್ಥ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ನನ್ನ ವಿರುದ್ಧ ಒಂದು ಆರೋಪ ಸಾಬೀತಾದರೂ ನೇಣು ಹಾಕಿಕೊಳ್ಳುವುದಾಗಿ ಹೇಳಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಷರತ್ತುಗಳನ್ನಿಟ್ಟಿದ್ದ ಕುಸ್ತಿಪಟುಗಳು: ಇನ್ನೊಂದೆಡೆ, ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಜೂನ್ 15 ರ ಒಳಗೆ ಕ್ರಮ ಕೈಗೊಳ್ಳಬೇಕು, ಜಾರ್ಜ್ ಶೀಟ್ ಸಲ್ಲಿಕೆ ಮಾಡಬೇಕು. ಶೀಘ್ರವೇ ಬ್ರಿಜ್ ಭೂಷಣ್ ಸಿಂಗ್ ಹಾಗೂ ಅವರ ಕುಟುಂಬವನ್ನು ಹೊರಗೆ ಇಟ್ಟು ಕುಸ್ತಿ ಫೆಡರೇಶನ್ಗೆ ಚುನಾವಣೆ ನಡೆಸಬೇಕು ಎಂಬ ಬೇಡಿಕೆ ಸೇರಿದಂತೆ ಹಲವು ಬೇಡಿಕೆಗಳನ್ನ ಪ್ರತಿಭಟನಾ ನಿರತ ಕುಸ್ತಿಪಟುಗಳು ಕ್ರೀಡಾ ಸಚಿವರ ಮುಂದಿಟ್ಟಿದ್ದರು.
ಕುಸ್ತಿಪಟುಗಳ ಬೇಡಿಕೆ ಬಗ್ಗೆ ಆಟಗಾರರ ಜೊತೆ ಸಭೆ ನಡೆಸಿದ್ದ ಕೇಂದ್ರ ಕ್ರೀಡಾ ಸಚಿವರು, ಅವರ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದ್ದರು. ಜೂನ್ 15 ರ ಒಳಗೆ ನಮ್ಮ ಬೇಡಿಕೆ ಈಡೇರಿಸಬೇಕು, 15ರ ಒಳಗೆ ಸಿಂಗ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸುವಂತೆ ಕುಸ್ತಿಪಟುಗಳು ಷರತ್ತು ಇಟ್ಟಿದ್ದರು. ಈಗ ಅವರ ಬೇಡಿಕೆ ಅನ್ವಯ ದೆಹಲಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ.
ಇದನ್ನೂ ಓದಿ: Wrestlers protest: ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಇಂದು ಚಾರ್ಜ್‌ಶೀಟ್ ಸಲ್ಲಿಕೆ