ನವದೆಹಲಿ: ಪೆಗಾಸಸ್ ಪ್ರಕರಣ ಹಾಗೂ ಇಂಧನ ಬೆಲೆ ಏರಿಕೆಗೆ ಆಕ್ರೋಶ ವ್ಯಕ್ತಪಡಿಸಿ ಕೇಂದ್ರ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದ 589 ಮಂದಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಲ್ಲಿ 28 ಮಹಿಳೆಯರು, ಇಬ್ಬರು ಸಂಸದರು ಹಾಗೂ ಇಬ್ಬರು ಶಾಸಕರು ಇದ್ದಾರೆ.
ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ ವಿ ಅವರಿಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಅನುಮತಿ ನೀಡಲಾಗಿಲ್ಲ. ಆದರೂ ರಾಷ್ಟ್ರ ರಾಜಧಾನಿಯ ರೈಸಾನಾ ರಸ್ತೆಯಲ್ಲಿ ಪ್ರತಿಭಟಿಸಿದ್ದಾರೆಂದು ದೆಹಲಿ ಡಿಸಿಪಿ ದೀಪಕ್ ಯಾದವ್ ತಿಳಿಸಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದಾರೆ.
ಇದನ್ನೂ ಓದಿ: Pegasus ಬಲೆಯಲ್ಲಿ ಸಿಲುಕಿದ್ದರೇ ಸುಪ್ರೀಂಕೋರ್ಟ್ ನ್ಯಾ. ಅರುಣ್ ಮಿಶ್ರಾ?
ಇಸ್ರೇಲ್ನ ಪೆಗಾಸಸ್ ಸ್ಪೈವೇರ್ ದೇಶದ ಕೆಲವು ಪ್ರಮುಖ ಪ್ರತಿಪಕ್ಷದ ನಾಯಕರು, ಪತ್ರಕರ್ತರು ಮತ್ತು ಉದ್ಯಮಿಗಳ ಮೇಲೆ ಮಾತ್ರ ಬೇಹುಗಾರಿಕೆ ನಡೆಸುತ್ತಿತ್ತು ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ತನಿಖೆ ಚುರುಕುಗೊಳಿಸಲಾಗಿದೆ. ಹಾಗೆಯೇ ಶತಕದ ಗಡಿ ದಾಟಿದ ಬಳಿಕವೂ ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇದೆ. ಇದರ ವಿರುದ್ಧ ಇಂದು ಯುವ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.