ನವದೆಹಲಿ: ಮಜ್ನು ಕಾ ತಿಲಾ ಪ್ರದೇಶದಲ್ಲಿ ಬೌದ್ಧ ನಿರಾಶ್ರಿತರ ಶಿಬಿರದಿಂದ ಬೇಹುಗಾರಿಕೆ ನಡೆಸಿದ ಶಂಕೆಯ ಮೇಲೆ ಚೀನಾದ ಮಹಿಳೆಯೊಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಅನುಮಾನದ ಆಧಾರದ ಮೇಲೆ ಪೊಲೀಸರು ಮಹಿಳೆಯ ದಾಖಲೆಗಳನ್ನು ಪರಿಶೀಲಿಸಿದಾಗ ಆಕೆಯ ಗುರುತಿನ ಚೀಟಿಯಲ್ಲಿ ಡೊಲ್ಮಾ ಲಾಮಾ ಎಂದು ಬರೆಯಲಾಗಿತ್ತು. ಈ ಮಹಿಳೆ ನೇಪಾಳದ ರಾಜಧಾನಿ ಕಠ್ಮಂಡು ಮೂಲದವರು ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಈ ಮಹಿಳೆ 2019 ರಿಂದ ಮಜ್ನು ಕಾ ತಿಲಾದಲ್ಲಿರುವ ಟಿಬೆಟಿಯನ್ ನಿರಾಶ್ರಿತರ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಜ್ನು ಕಾ ತಿಲಾ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಬೌದ್ಧ ನಿರಾಶ್ರಿತರು ಇಲ್ಲಿ ವಾಸಿಸುತ್ತಿದ್ದಾರೆ. ಇದರ ಲಾಭವನ್ನು ಪಡೆದುಕೊಂಡ ಈ ಮಹಿಳೆ ತನ್ನ ಗುರುತನ್ನು ಬದಲಾಯಿಸಿಕೊಂಡು ಇಲ್ಲಿ ವಾಸಿಸುತ್ತಿದ್ದರು.
ಮಹಿಳೆ ಬೌದ್ಧ ಸನ್ಯಾಸಿಗಳ ಸಾಂಪ್ರದಾಯಿಕ ಕಡು ಕೆಂಪು ನಿಲುವಂಗಿಯನ್ನು ಧರಿಸಿದ್ದರು ಮತ್ತು ತನ್ನ ಕೂದಲನ್ನು ಚಿಕ್ಕದಾಗಿ ಇಟ್ಟುಕೊಂಡು ತನ್ನ ಗುರುತನ್ನು ಮರೆಮಾಡಿಕೊಂಡಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಚೀನಾದ ಪಾಸ್ಪೋರ್ಟ್ ಮೇಲೆ ಭಾರತಕ್ಕೆ ಆಗಮನ: ಪೊಲೀಸರು, ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಸ್‌ಆರ್‌ಆರ್‌ಒ) ಸಹಯೋಗದಲ್ಲಿ ವಶಕ್ಕೆ ಪಡೆದಿರುವ ಮಹಿಳೆಯ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದಾಗ ಆಕೆ 2019 ರಲ್ಲಿ ಚೀನಾದ ಪಾಸ್‌ಪೋರ್ಟ್‌ನಲ್ಲಿ ಭಾರತಕ್ಕೆ ಬಂದಿರುವುದು ಗೊತ್ತಾಗಿದೆ.
ಚೀನಾದ ಕಮ್ಯುನಿಸ್ಟ್ ಪಕ್ಷದ ಕೆಲವು ಮುಖಂಡರು ತನ್ನನ್ನು ಕೊಲ್ಲಲು ಬಯಸಿದ್ದರು, ಅದಕ್ಕಾಗಿಯೇ ತನ್ನ ಜೀವ ಉಳಿಸಲು ಭಾರತಕ್ಕೆ ಬಂದಿದ್ದೇನೆ ಎಂದು ವಿಚಾರಣೆ ವೇಳೆ ಚೀನಾದ ಬಂಧಿತ ಮಹಿಳೆ ಬಾಯ್ಬಿಟ್ಟಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಮತ್ತು ಕಳೆದ ಎರಡು ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದೇನೆ ಎಂದು ಮಹಿಳೆ ಇದೇ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಬಂಧಿತ ಚೀನಿ ಮಹಿಳೆಗೆ ಇಂಗ್ಲಿಷ್, ಮ್ಯಾಂಡರಿನ್ ಮತ್ತು ನೇಪಾಳಿ ಸೇರಿದಂತೆ ಮೂರು ಭಾಷೆಗಳ ಜ್ಞಾನ ಹೊಂದಿದ್ದಾರೆ.
ಇದನ್ನು ಓದಿ:5 ದಿನಗಳಲ್ಲಿ 1.52 ಕೋಟಿ ರೂ. ವ್ಯವಹಾರ: ಶಂಕೆ ಮೂಡಿಸಿದ ಚೀನಾ ಯುವಕರ ಕೃತ್ಯ