ನವದೆಹಲಿ: ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಿರುವ ಮನವಿಯ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್)ಕ್ಕೆ ದೆಹಲಿ ಹೈಕೋರ್ಟ್ ಶುಕ್ರವಾರ ಸೂಚಿಸಿದೆ.
ನೈಋತ್ಯ ದೆಹಲಿಯ ಹಳೆ ನಂಗಲ್ ಗ್ರಾಮದಲ್ಲಿ 2021ರಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಈ ನೊಂದ ಪೋಷಕರ ಫೋಟೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಸಂತ್ರಸ್ತೆಯ ಗುರುತು ಬಹಿರಂಗಪಡಿಸಿದ ಆರೋಪ ರಾಹುಲ್ ಗಾಂಧಿ ಮೇಲಿದೆ. ಈ ಪ್ರಕರಣ ಸಂಬಂಧ ರಾಹುಲ್ ಗಾಂಧಿ ವಿರುದ್ಧ ಕೇಸ್ ದಾಖಲಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಮಕರಂದ್ ಸುರೇಶ್ ಎಂಬುವವರು ಹೈಕೋರ್ಟ್ ಮೊರೆ ಹೋಗಿದ್ದಾರೆ.
ಈ ಅರ್ಜಿ ವಿಚಾರಣೆಯನ್ನು ಶುಕ್ರವಾರ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠವು ನಡೆಸಿದೆ. ಈ ಮನವಿಯ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ನ್ಯಾಯ ಪೀಠ ಸೂಚಿಸಿ ನೋಟಿಸ್ ಜಾರಿ ಮಾಡಿದೆ. ಅಲ್ಲದೇ, ನಾಲ್ಕು ವಾರಗಳಲ್ಲಿ ಅಫಿಡವಿಟ್ ಸಲ್ಲಿಸಲು ಗಡುವು ನೀಡಲಾಗಿದ್ದು, ಪ್ರಕರಣದ ಮುಂದಿನ ವಿಚಾರಣೆ ಜುಲೈ 27ರಂದು ನಡೆಯಲಿದೆ.
ಏನಿದು ಪ್ರಕರಣ?: 2021ರ ಆಗಸ್ಟ್ 1ರಂದು ಅಪ್ರಾಪ್ತ ಬಾಲಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು. ಈ ಪ್ರಕರಣದ ತನಿಖೆಯಲ್ಲಿ ಸ್ಮಶಾನದ ಪೂಜಾರಿಯೊಬ್ಬ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಪತ್ತೆಯಾಗಿತ್ತು. ಈ ಸಂತ್ರಸ್ತ ಕುಟುಂಬಸ್ಥರನ್ನು ಭೇಟಿ ಮಾಡಿದ್ದ ರಾಹುಲ್ ಗಾಂಧಿ, ಕುಟುಂಬಕ್ಕೆ ಬೆಂಬಲ ನೀಡುವ ಭರವಸೆ ನೀಡಿದ್ದರು. ಅಲ್ಲದೇ, ತಮ್ಮ ಭೇಟಿಯ ಬಗ್ಗೆ ಟ್ವೀಟ್ ಮಾಡಿ, ಸಂತ್ರಸ್ತೆಯ ಪೋಷಕರ ಜೊತೆಗಿನ ಫೋಟೋಗಳನ್ನು ರಾಹುಲ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.
ಆದರೆ, ಕಾನೂನಿನ ಸಂಘರ್ಷಕ್ಕೆ ಒಳಪಟ್ಟ ವಿಶೇಷವಾಗಿ ಲೈಂಗಿಕ ಅಪರಾಧದ ಸಂತ್ರಸ್ತರ ಗುರುತು ಬಹಿರಂಗಪಡಿಸುವಂತಿಲ್ಲ. ಸಂತ್ರಸ್ತರ ಯಾವುದೇ ಚಿತ್ರ ಅಥವಾ ಅವರ ಗುರುತನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬಹಿರಂಗಪಡಿಸುವ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ಪ್ರಕಟಿಸುವಂತಿಲ್ಲ. ಹೀಗಾಗಿ 2015ರ ಬಾಲಾಪರಾಧಿ ಕಾಯ್ದೆಯ ಸೆಕ್ಷನ್ 74 ಮತ್ತು 2012ರ ಪೋಕ್ಸೊ ಕಾಯ್ದೆಯ ಸೆಕ್ಷನ್ 23(2) ಅನ್ನು ರಾಹುಲ್ ಗಾಂಧಿ ಉಲ್ಲಂಘಿಸಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದರು.
ಅಲ್ಲದೇ, ರಾಹುಲ್ ಗಾಂಧಿ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಮಧ್ಯಪ್ರವೇಶಿಸುವಂತೆ ಕೋರಿ ಹೈಕೋರ್ಟ್ಗೆ ಕೋರಲಾಗಿದೆ. ಇದೇ ಪ್ರಕರಣದಲ್ಲಿ ಈ ಹಿಂದೆ ಟ್ವಿಟ್ಟರ್ ಪರ ವಕೀಲ ಸಜನ್ ಪೂವಯ್ಯ, ಈಗಾಗಲೇ ಆ ಟ್ವೀಟ್ ತೆಗೆದುಹಾಕಲಾಗಿದೆ ಮತ್ತು ಸ್ವಲ್ಪ ಸಮಯದವರೆಗೆ ಟ್ವಿಟರ್ ಖಾತೆಯನ್ನು ಸಹ ನಿರ್ಬಂಧಿಸಲಾಗಿದೆ. ಟ್ವೀಟ್ ತೆಗೆದುಹಾಕಿದ್ದರಿಂದ ಅರ್ಜಿಯಲ್ಲಿ ಏನೂ ಉಳಿದಿಲ್ಲ ಎಂದು ಹೇಳಿದ್ದರು. ಆದರೆ, ಟ್ವೀಟ್ ತೆಗೆದು ಹಾಕಿದ್ದರೂ, ಸಂತ್ರಸ್ತೆಯ ಬಹಿರಂಗ ಪಡಿಸಿದ ಅಪರಾಧವು ಹಾಗೆ ಉಳಿದುಕೊಂಡಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹ!