ನವದೆಹಲಿ: ಪರಿಸರ ಕಾರ್ಯಕರ್ತೆ ದಿಶಾ ರವಿ ಅವರ ಮಾಹಿತಿ ಗೌಪ್ಯತೆ ಮತ್ತು ವಾಕ್ ಸ್ವಾತಂತ್ರ್ಯದ ಹಕ್ಕನ್ನು ರಕ್ಷಿಸಬೇಕು ಎಂದು ದೆಹಲಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಈ ಹಿಂದೆ, ನನ್ನ ವಿರುದ್ಧ ದಾಖಲಾದ ಎಫ್‌ಐಆರ್‌ಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಮಾಧ್ಯಮಗಳಿಗೆ ನೀಡದಂತೆ ಪೊಲೀಸರಿಗೆ ಸೂಚಿಸಬೇಕು ಎಂದು ಕೋರಿ ದಿಶಾ ರವಿ ಗುರುವಾರ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಸದ್ಯ ಹೈಕೋರ್ಟ್ ಮನವಿಯನ್ನು ಪರಿಶೀಲಿಸಿದ್ದು, ಹಕ್ಕಿನ ರಕ್ಷಣೆ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಅಷ್ಟೇ ಅಲ್ಲದೆ, ತಮಗೆ ದೊರಕಿರುವ ಮಾಹಿತಿ ಪ್ರಸಾರ ಮಾಡುವ ಮುನ್ನ ಪರಿಶೀಲನೆ ನಡೆಸಬೇಕು ಎಂದು ಕೋರ್ಟ್ ಮಾಧ್ಯಮಗಳಿಗೆ ಸೂಚಿಸಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ತಿಂಗಳು ಗಣರಾಜ್ಯೋತ್ಸವ ವೇಳೆ ರೈತ ವಿರೋಧಿ ನೀತಿ ಖಂಡಿಸಿ ನಡೆದ ಟ್ರ್ಯಾಕ್ಟರ್ ಪ್ರತಿಭಟನೆಗೆ 'ಟೂಲ್ಕಿಟ್' ಅನ್ನು ಶೇರ್ ಮಾಡಿದ ಆರೋಪದಡಿ ದೆಹಲಿಯ ಸೈಬರ್ ಕ್ರೈಂ ಪೊಲೀಸರು ಬೆಂಗಳೂರಿನಲ್ಲಿ ದಿಶಾ ರವಿ ಅವರನ್ನು ಬಂಧಿಸಿದ್ದರು.