ನವದೆಹಲಿ: ವಿಶೇಷ ವಿವಾಹ ಕಾಯ್ದೆ, ಹಿಂದೂ ಮತ್ತು ವಿದೇಶಿ ವಿವಾಹ ಕಾನೂನುಗಳ ಅಡಿ ಸಲಿಂಗ ವಿವಾಹಗಳನ್ನು ಅಂಗೀಕರಿಸುವ ಅರ್ಜಿಗಳ ವಿಚಾರಣೆಯ ನೇರ ಪ್ರಸಾರವನ್ನು ಕೋರಿ ಸಲ್ಲಿಸಲಾದ ಮನವಿ ಕುರಿತು ದೆಹಲಿ ಹೈಕೋರ್ಟ್ ಕೇಂದ್ರದಿಂದ ಪ್ರತಿಕ್ರಿಯೆ ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ಪೀಠವು ಈ ವಿಷಯದ ಬಗ್ಗೆ ಸೂಚನೆಗಳನ್ನು ತೆಗೆದುಕೊಳ್ಳಲು ಮತ್ತು ಉತ್ತರ ಸಲ್ಲಿಸಲು ಕೇಂದ್ರದ ವಕೀಲರಿಗೆ ಗಡುವು ನೀಡಿದ್ದು, ಮುಂದಿನ ವಿಚಾರಣೆಯನ್ನ ಮುಂದಿನ ವರ್ಷ ಫೆಬ್ರವರಿ 3ಕ್ಕೆ ಮುಂಡೂಡಿದೆ.
ಇದನ್ನೂ ಓದಿ: ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಪಿಐಎಲ್: ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ನೋಟಿಸ್
ವಿಶೇಷ, ಹಿಂದೂ ಮತ್ತು ವಿದೇಶಿ ವಿವಾಹ ಕಾನೂನುಗಳ ಅಡಿ ಸಲಿಂಗ ವಿವಾಹಗಳಿಗೆ ಮಾನ್ಯತೆ ನೀಡಲು ಕೋರಿ ಹಲವಾರು ಸಲಿಂಗ ದಂಪತಿಗಳು ಸಲ್ಲಿಸಿದ ಅರ್ಜಿಗಳನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ.
ಕೆಲವು ಅರ್ಜಿದಾರರನ್ನು ಪ್ರತಿನಿಧಿಸಿದ ಹಿರಿಯ ವಕೀಲ ನೀರಜ್ ಕಿಶನ್ ಕೌಲ್, ದೇಶದ ಒಟ್ಟು ಜನಸಂಖ್ಯೆಯ ಶೇ.7 - 8ರಷ್ಟು ಜನರಿಗೆ ಈ ವಿಚಾರದ ವಿಚಾರಣೆಯ ನೇರ ಪ್ರಸಾರ ಅಗತ್ಯವಿದೆ. ಇದು ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯವಾಗಿದೆ ಎಂದು ಹೇಳಿದ್ದಾರೆ.