ನವದೆಹಲಿ: ದೆಹಲಿ ಮತ್ತು ಕೇಂದ್ರ ಸರ್ಕಾರ ನಡುವಿನ ಅಧಿಕಾರದ ವಿವಾದದ ಕುರಿತು ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ಪೀಠ ಇಂದು ಮಹತ್ವದ ಆದೇಶ ನೀಡಿದೆ. ಅಧಿಕಾರಿಗಳ ಸೇವೆ ಮತ್ತು ನಿಯಮಗಳ ಮೇಲೆ ಶಾಸಕಾಂಗ ಮತ್ತು ಕಾರ್ಯಕಾರಿ ಅಧಿಕಾರವನ್ನು ದೆಹಲಿ ಸರ್ಕಾರ ಹೊಂದಿದೆ. ಚುನಾಯಿತ ಸರ್ಕಾರವೇ ಆಡಳಿತದ ಮೇಲೆ ಪೂರ್ಣ ನಿಯಂತ್ರಣ ಹೊಂದಿರಬೇಕೆಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರನ್ನು ಒಳಗೊಂಡ ಸಾಂವಿಧಾನಿಕ ಪೀಠವು ಪ್ರಕರಣದ ಕುರಿತು ಸರ್ವಾನುಮತದ ಆದೇಶ ಪ್ರಕಟಿಸಿತು. ದೆಹಲಿ ಸರ್ಕಾರಕ್ಕೆ ಆಡಳಿತದ ಮೇಲೆ ಅಧಿಕಾರವಿಲ್ಲ ಎಂದು 2019ರಲ್ಲಿ ನ್ಯಾ.ಅಶೋಕ್ ಭೂಷಣ್ ನೀಡಿದ್ದ ತೀರ್ಪು ಒಪ್ಪುವುದಿಲ್ಲ ಎಂದು ಸಿಜೆಐ ತಿಳಿಸಿದ್ದಾರೆ.
ದೆಹಲಿಯಲ್ಲಿ ಸರ್ಕಾರಿ ನೌಕರರ ವರ್ಗಾವಣೆ ಮತ್ತು ಹುದ್ದೆಗಳ ನಿಯೋಜನೆ ಮೇಲೆ ಆಡಳಿತಾತ್ಮಕ ನಿಯಂತ್ರಣಕ್ಕೆ ಸಂಬಂಧಿಸಿದ ವಿಷಯವಾಗಿ ಸರ್ವೋಚ್ಛ ನ್ಯಾಯಾಲಯವು ತನ್ನ ಈ ಆದೇಶ ನೀಡಿದೆ. ಇದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರಕ್ಕೆ ಸಂದ ಜಯವೆಂದು ವಿಶ್ಲೇಷಿಸಲಾಗಿದೆ. ಆದಾಗ್ಯೂ, ಸಾರ್ವಜನಿಕ ಸುವ್ಯವಸ್ಥೆ, ಪೊಲೀಸ್ ಮತ್ತು ಭೂಮಿ ಮೇಲೆ ದೆಹಲಿ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಆದರೆ, ಇತರ ರಾಜ್ಯಗಳಂತೆಯೇ ದೆಹಲಿ ಸರ್ಕಾರ ಕೂಡ ಸರ್ಕಾರದ ಪ್ರಾತಿನಿಧಿಕ ಸ್ವರೂಪ ಹೊಂದಿದೆ. ಕೇಂದ್ರ ಸರ್ಕಾರದ ಅಧಿಕಾರದ ಯಾವುದೇ ವಿಸ್ತರಣೆಯು ಸಾಂವಿಧಾನಿಕ ನಡೆಗೆ ವಿರುದ್ಧವಾಗಿರುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಆಡಳಿತಾತ್ಮಕ ಸೇವೆಗಳನ್ನು ಜಾರಿಗೊಳಿಸಬೇಕಾದ ಸರ್ಕಾರಿ ನೌಕರರ ಮೇಲೆ ಶಾಸಕಾಂಗ ಮತ್ತು ಕಾರ್ಯಕಾರಿ ನಿಯಂತ್ರಣದಿಂದ ಹೊರಗಿಟ್ಟರೆ, ಮಂತ್ರಿಗಳು ಸಹ ಆ ನೌಕರರ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ. ಅಲ್ಲದೇ, ಸ್ಥಳೀಯ ಸರ್ಕಾರದ ನಿಯಂತ್ರಣದಿಂದ ಪ್ರತ್ಯೇಕಿಸಲ್ಪಟ್ಟಿದ್ದೇವೆ ಎಂದು ಅಧಿಕಾರಿಗಳು ಭಾವಿಸುತ್ತಾರೆ. ಇದು ಹೊಣೆಗಾರಿಕೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.
ಪ್ರಜಾಪ್ರಭುತ್ವ ಸರ್ಕಾರದಲ್ಲಿ ಆಡಳಿತದ ನಿಜವಾದ ಶಕ್ತಿ ಚುನಾಯಿತ ಸರ್ಕಾರಕ್ಕೆ ಇರಬೇಕು. ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರಕ್ಕೆ ಅಧಿಕಾರಿಗಳನ್ನು ನಿಯಂತ್ರಿಸುವ ಅಧಿಕಾರವನ್ನು ನೀಡದಿದ್ದರೆ, ಉತ್ತರದಾಯಿತ್ವದ ತ್ರಿವಳಿ ಸರಪಳಿಯ ತತ್ವವು ಅನಗತ್ಯವಾಗುತ್ತದೆ ಎಂದು ಸಾಂವಿಧಾನಿಕ ಪೀಠವು ಹೇಳಿದೆ.
2014ರಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದ ನಂತರ ರಾಷ್ಟ್ರ ರಾಜಧಾನಿಯ ಆಡಳಿತದ ಮೇಲೆ ನಿಯಂತ್ರಣ ವಿಷಯವಾಗಿ ಕೇಂದ್ರ ಸರ್ಕಾರದೊಂದಿಗೆ ಕಿತ್ತಾಟಕ್ಕೆ ಸಾಕ್ಷಿಯಾಗಿತ್ತು. ಕೇಂದ್ರವು ಲಿಫ್ಟಿನೆಂಟ್ ಗರ್ವನರ್ ಮೂಲಕ ಅಧಿಕಾರಿಗಳ ಮೇಲೆ ಹಿಡಿತ ಸಾಧಿಸುತ್ತದೆ ಎಂದು ಅರವಿಂದ್ ಕೇಜ್ರಿವಾಲ್ ಸರ್ಕಾರ ಆರೋಪಿಸುತ್ತಲೇ ಬಂದಿತ್ತು.
ಇದೀಗ ಸುಪ್ರೀಂಕೋರ್ಟ್ ತೀರ್ಪನ್ನು ಆಮ್ ಆದ್ಮಿ ಪಕ್ಷ ಮತ್ತು ಕೇಜ್ರಿವಾಲ್ ಸ್ವಾಗತಿಸಿದ್ದಾರೆ. ದೆಹಲಿಯ ಜನರಿಗೆ ನ್ಯಾಯ ಒದಗಿಸಿದ ನ್ಯಾಯಾಲಯಕ್ಕೆ ಹೃತ್ಪೂರ್ವಕ ಧನ್ಯವಾದ. ಇದು ಅಭಿವೃದ್ಧಿಯ ವೇಗವನ್ನು ಹಲವು ಪಟ್ಟು ಹೆಚ್ಚಾಗುತ್ತದೆ ಎಂದು ಸಿಎಂ ಹೇಳಿದ್ದಾರೆ. ಮತ್ತೊಂದೆಡೆ, ಸುಪ್ರೀಂನ ನಿರ್ಧಾರವು ದೇಶಾದ್ಯಂತ ರಾಜ್ಯ ಸರ್ಕಾರಗಳನ್ನು ಉರುಳಿಸುವ ಉದ್ದೇಶದ ಮೇಲೆ ಬಲವಾದ ಹೊಡೆತ ಎಂದು ಆಪ್ ಹೇಳಿದೆ.
ಇದನ್ನೂ ಓದಿ: ರಾಜಸ್ಥಾನದ ತಮ್ಮದೇ ಸರ್ಕಾರದ ವಿರುದ್ಧ 'ಜನಸಂಘರ್ಷ ಯಾತ್ರೆ'ಗಿಳಿದ ಸಚಿನ್ ಪೈಲಟ್