ನವದೆಹಲಿ: ದೆಹಲಿಯಲ್ಲಿ ಡಿಸಿಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಿತೇಂದ್ರ ಮಣಿ ಅವರು ಎಂಟು ತಿಂಗಳಲ್ಲಿ ಬರೋಬ್ಬರಿ 46 ಕೆಜಿ ತೂಕ ಇಳಿಸಿಕೊಂಡು ಸುದ್ದಿಯಾಗಿದ್ದಾರೆ. ನಿಯಮಿತ ನಡಿಗೆ ಹಾಗೂ ಕಟ್ಟುನಿಟ್ಟಿನ ಆಹಾರ ನಿಯಮಗಳಿಂದ ಫಿಟ್ ಆಗುತ್ತಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಹಿಂದೆ ಜಿತೇಂದ್ರ ಮಣಿ 130 ಕೆ.ಜಿ ತೂಕ ಹೊಂದಿದ್ದು, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೆಚ್ಚಿದ ಕೊಬ್ಬಿನಂಶದಿಂದಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದರು. ಈ ಯಾತನೆಯಿಂದ ಹೊರಬರಲು ಅವರು ದೃಢ ಸಂಕಲ್ಪ ತೆಗೆದುಕೊಂಡು ತಮ್ಮ ಜೀವನಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡರು.
ಪ್ರತಿದಿನ 15 ಸಾವಿರ ಅಡಿ ನಡೆಯುತ್ತಿದ್ದರು. ಅವರು ಹೆಚ್ಚಿನ ಕಾರ್ಬೋಹೈಡ್ರೇಟ್ ಆಹಾರಗಳಾದ ಅಕ್ಕಿ ಮತ್ತು ರೊಟ್ಟಿಗಳನ್ನು ತ್ಯಜಿಸಿದರು. ಅದರ ಬದಲಾಗಿ ಸೂಪ್, ಸಲಾಡ್ ಮತ್ತು ಹಣ್ಣುಗಳಂತಹ ಪೌಷ್ಟಿಕಾಂಶದ ಆಹಾರಗಳನ್ನು ಸೇವಿಸತೊಡಗಿದರು. ಇದರ ಪರಿಣಾಮವಾಗಿ ಅವರು ಎಂಟು ತಿಂಗಳಲ್ಲಿ ಬರೋಬ್ಬರಿ 46 ಕೆಜಿ ತೂಕವನ್ನು ಕಳೆದುಕೊಂಡರು. ಅವರ ಸೊಂಟದ ಸುತ್ತಳತೆ 12 ಇಂಚುಗಳಷ್ಟು ಕಡಿಮೆಯಾಗಿದೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿದ್ದಾರೆ.
'ನಾನು ತೂಕ ಇಳಿಸಿಕೊಳ್ಳಲು ನಿರ್ಧರಿಸಿದಾಗ, ಪ್ರತಿ ತಿಂಗಳು 4.5 ಲಕ್ಷ ಹೆಜ್ಜೆಗಳನ್ನು ನಡೆಯುವ ಗುರಿಯನ್ನು ಹೊಂದಿದ್ದೆ. ಎಂಟು ತಿಂಗಳಲ್ಲಿ ಸುಮಾರು 32 ಲಕ್ಷ ಹೆಜ್ಜೆ ನಡೆದಿದ್ದೇನೆ. ಈಗ ನನ್ನ ತೂಕ 84 ಕೆಜಿಗೆ ಇಳಿದಿದೆ' ಎಂದು ಡಿಸಿಪಿ ವಿವರಿಸಿದರು.
ಪೊಲೀಸ್ ಕಮೀಷನರ್ ಶ್ಲಾಘನೆ.. ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋಡಾ ಅವರು ಜಿತೇಂದ್ರ ಮಣಿ ಅವರ ಪ್ರಯತ್ನವನ್ನು ಶ್ಲಾಘಿಸಿದರು. ಪೊಲೀಸ್ ಇಲಾಖೆ ವತಿಯಿಂದ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು.
ಓದಿ: ದೇಹದ ತೂಕ ಇಳಿಸಿಕೊಂಡೇ ಕ್ಷೇತ್ರಕ್ಕೆ 2,300 ಕೋಟಿ ಅನುದಾನ ತಂದ ಸಂಸದ!