ರಾಯ್‌ಪುರ್ (ಛತ್ತೀಸ್‌ಗಢ): ರಾಯ್‌ಪುರದ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣದಿಂದ ರಾಷ್ಟ್ರ ರಾಜಧಾನಿ ನವದೆಹಲಿಗೆ ತೆರಳುತ್ತಿದ್ದ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿ ಹೊಡೆದ ಪರಿಣಾಮ ತಕ್ಷಣವೇ ಟೇಕ್ ಆಫ್ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
179 ಪ್ರಯಾಣಿಕರನ್ನು ಹೊತ್ತ AIC 469 ವಿಮಾನವು ಛತ್ತೀಸ್ಗಢದ ರಾಜಧಾನಿ ರಾಯ್ಪುರ ವಿಮಾನ ನಿಲ್ದಾಣದಿಂದ ಬೆಳಗ್ಗೆ 10.05ಕ್ಕೆ ಟೇಕ್ಆಫ್ ಆಗಲು ಸಿದ್ಧವಾಗಿತ್ತು. ಈ ಸಂದರ್ಭದಲ್ಲಿ ಟೇಕ್ಆಫ್ ಆಗುತ್ತಿದ್ದಂತೆ ಹಕ್ಕಿಯೊಂದು ಅಡ್ಡ ಬಂದಿದೆ ಎಂದು ರಾಯ್‌ಪುರ್ ವಿಮಾನ ನಿಲ್ದಾಣದ ನಿರ್ದೇಶಕ ರಾಕೇಶ್ ರಂಜನ್ ಸಹಾಯ್ ತಿಳಿಸಿದ್ದಾರೆ.
"ಘಟನೆ ಸಂಭವಿಸಿದ ತಕ್ಷಣ ಪ್ರಯಾಣಿಕರನ್ನು ಕೆಳಗಿಳಿಸಿ, ವಿಮಾನ ನಿಲ್ದಾಣದ ಸಿಬ್ಬಂದಿ ರನ್ ವೇ ತಪಾಸಣೆ ನಡೆಸಿದರು. ಈ ವೇಳೆ, ಹಕ್ಕಿಯ ಮೃತದೇಹದ ತುಂಡುಗಳು ಕಂಡು ಬಂದವು. ಏರ್ ಇಂಡಿಯಾದ ಇಂಜಿನಿಯರಿಂಗ್ ಸಿಬ್ಬಂದಿ ವಿಮಾನವನ್ನು ಪರಿಶೀಲಿಸುತ್ತಿದ್ದಾರೆ" ಎಂದು ಹೇಳಿದರು.
ಈ ವಿಮಾನದಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವ ರೇಣುಕಾ ಸಿಂಗ್ ಕೂಡ ಇದ್ದರು. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲು ಅವರು ದೆಹಲಿಗೆ ತೆರಳುತ್ತಿದ್ದರು ಎಂದು ಆಪ್ತ ಸಹಾಯಕ ಸಿಬ್ಬಂದಿ ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, "ಕೆಲವೊಮ್ಮೆ ಪಕ್ಷಿಗಳ ಹೊಡೆತಗಳು ವಿಮಾನಕ್ಕೆ ದೊಡ್ಡ ಹಾನಿ ಉಂಟು ಮಾಡುತ್ತವೆ. ಇಂಜಿನಿಯರಿಂಗ್ ಸಿಬ್ಬಂದಿಯ ಸಂಪೂರ್ಣ ತಪಾಸಣೆಯ ನಂತರ ಏರ್ ಇಂಡಿಯಾ ವಿಮಾನಕ್ಕೆ ಉಂಟಾದ ನಿಖರ ಹಾನಿಯನ್ನು ಪತ್ತೆ ಮಾಡಲಾಗುತ್ತದೆ" ಎಂದು ತಿಳಿಸಿದ್ದಾರೆ.