ನವದೆಹಲಿ : ಕೋವಿಡ್ ಲಸಿಕೆಯಾದ ಕೋವ್ಯಾಕ್ಸಿನ್ ಅನ್ನು ತುರ್ತು ಬಳಕೆ ಲಸಿಕೆಗಳ ಪಟ್ಟಿಯುಲ್ಲಿ ಸೇರಿಸಲು ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯೂಹೆಚ್ಒ) ಇನ್ನು ನಾಲ್ಕರಿಂದ ಆರು ವಾರಗಳ ಒಳಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ವಿಶ್ವ ಆರೋಗ್ಯ ಸಂಘಟನೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.
ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್ಮೆಂಟ್ (ಸಿಎಸ್ಇ) ಆಯೋಜಿಸಿದ್ದ ವೆಬಿನಾರ್ನಲ್ಲಿ ಮಾತನಾಡಿದ ಸೌಮ್ಯಾ ಸ್ವಾಮಿನಾಥನ್, ಕೋವ್ಯಾಕ್ಸಿನ್ ಉತ್ಪಾದನೆ ಮಾಡುತ್ತಿರುವ ಭಾರತ್ ಬಯೋಟೆಕ್ ಎಲ್ಲಾ ಮಾಹಿತಿಯನ್ನು ಅಪ್ಲೋಡ್ ಮಾಡುತ್ತಿದೆ ಎಂದಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳ ಅನ್ವಯ ಹೊಸ ಅಥವಾ ಲೈಸೆನ್ಸ್ ಪಡೆಯದ ಔಷಧಗಳನ್ನು ತುರ್ತು ಬಳಕೆಯ ಪಟ್ಟಿಯಲ್ಲಿ ಸೇರಿಸಿ, ಅವುಗಳನ್ನು ಸಾರ್ವಜನಿಕವಾಗಿ ಬಳಸಬಹುದಾಗಿದೆ. ಡಬ್ಲ್ಯೂಹೆಚ್ಒ ಅನುಮೋದನೆ ನೀಡುವುದರಿಂದ ಕೋವ್ಯಾಕ್ಸಿನ್ ಜಾಗತಿಕ ಮಟ್ಟದಲ್ಲಿ ತನ್ನ ವ್ಯಾಪಾರ ವೃದ್ಧಿಸಿಕೊಳ್ಳಲು ಸಹಕಾರಿಯಾಗಲಿದೆ.
ಇದನ್ನೂ ಓದಿ: ಕಾಂಟ್ರೋವರ್ಸಿ ಇಷ್ಟವಿಲ್ಲ, ವಿವಾದಕ್ಕೆ ಅವರೇ ಅಂತ್ಯವಾಡಿದ್ರೆ ನಂಗೆ ಸಂತೋಷ : ಸಂಸದೆ ಸುಮಲತಾ ಅಂಬಿ
ಔಷಧಗಳನ್ನು ಅಥವಾ ಲಸಿಕೆಗಳನ್ನು ತುರ್ತು ಬಳಕೆಯ ಪಟ್ಟಿಗೆ ಸೇರಿಸಲು, ಮೂರು ಹಂತದ ಪ್ರಯೋಗವನ್ನು ಆ ಲಸಿಕೆ ಅಥವಾ ಔಷಧ ಪೂರೈಸಬೇಕಾಗುತ್ತದೆ. ಆ ನಂತರ ಪ್ರಯೋಗದ ಅಂಕಿ-ಅಂಶಗಳನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಸಿದಾಗ, ವಿಶ್ವ ಆರೋಗ್ಯ ಸಂಸ್ಥೆಯ ಪರಿಣಿತರು ಅಂಕಿ-ಅಂಶಗಳನ್ನು ಪರಿಶೀಲನೆ ನಡೆಸಿ, ಲಸಿಕೆ ಅಥವಾ ಔಷಧಿಗೆ ಅನುಮೋದನೆ ನೀಡಬೇಕೋ? ಬೇಡವೋ ಎಂದು ನಿರ್ಧರಿಸುತ್ತಾರೆ.
ಸದ್ಯಕ್ಕೆ ಕೇವಲ ಆರು ಕೋವಿಡ್ ಲಸಿಕೆಗಳಿಗೆ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದ್ದು, ಈಗ ಕೋವ್ಯಾಕ್ಸಿನ್ ಪರಿಶೀಲನೆ ನಡೆಯುತ್ತಿದೆ.