ಕೊರೊನಾ ಜಗತ್ತನ್ನು ನಡುಗಿಸುತ್ತಿದೆ. ಈ ರೋಗದಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಸಾಲದೆಂಬಂತೆ ಕೊರೊನಾ ಸೆಕೆಂಡ್ ವೇವ್ ಕೂಡ ಮುಂದುವರೆದಿದೆ. ಇದೀಗ ಮಹಾಮಾರಿಯನ್ನು ನಿಯಂತ್ರಿಸುವ ಏಕೈಕ ಮಾರ್ಗ ಎಂದರೆ ವ್ಯಾಕ್ಸಿನೇಷನ್ ಎಂದು ತಜ್ಞರು ಹೇಳುತ್ತಿದ್ದಾರೆ. ಅನೇಕ ದೇಶಗಳಲ್ಲಿ ಶೇಕಡಾ 50ರಷ್ಟು ಲಸಿಕಾ ಕಾರ್ಯಕ್ರಮಗಳು ಈಗಾಗಲೇ ಪೂರ್ಣಗೊಂಡಿವೆ.
ಗೊಂದಲದಲ್ಲಿ ಸಾಮಾನ್ಯ ಜನ
ಮತ್ತೊಂದೆಡೆ ಕೆಲವರು ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಕೆಲ ವದಂತಿಗಳು ಅವರ ಭಯವನ್ನು ಹೆಚ್ಚಿಸುತ್ತಿವೆ. ಈಗಿರುವ ಅನುಮಾನಗಳು ಸಾಲುವುದಿಲ್ಲ ಎಂಬಂತೆ ಆಘಾತಕಾರಿ ಸುದ್ದಿಯೊಂದು ಹರಿದಾಡುತ್ತಿದೆ. ಕೊರೊನಾ ಲಸಿಕೆ ತೆಗೆದುಕೊಳ್ಳುವುದರಿಂದ ಎರಡು ವರ್ಷಗಳಲ್ಲಿ ಸಾಯುತ್ತಾರೆ ಎಂಬ ವದಂತಿ ಹುಟ್ಟಿಕೊಂಡಿದೆ. ಈ ಸುದ್ದಿ ಲಸಿಕೆ ಹಾಕಿಸಿಕೊಳ್ಳದವರನ್ನು ಮತ್ತು ಹಾಕಿಸಿಕೊಂಡವರಲ್ಲಿ ಆತಂಕ ಹುಟ್ಟಿಸುತ್ತಿದೆ. ಲಸಿಕೆಗಳನ್ನು ಹೊರತುಪಡಿಸಿ ವೈರಸ್ ವಿರುದ್ಧ ಹೋರಾಡಲು ಮತ್ತೊಂದು ದಾರಿ ಇಲ್ಲ ಎಂದು ತಜ್ಞರು ಹೇಳುತ್ತಿದ್ದರೇ, ವದಂತಿ ಹುಟ್ಟಿಸಿದವರ ಮಾತು ಕಟ್ಟಿಕೊಂಡು ಜನರು ಗೊಂದಲಕ್ಕೊಳಗಾಗುತ್ತಿದ್ದಾರೆ.
ಈ ಗಾಳಿ ಸುದ್ದಿ ಕುರಿತು 'ಪಿಬಿಐ ಫ್ಯಾಕ್ಟ್ ಚೆಕ್' ನಡೆಸಿ ಸತ್ಯಾಂಶ ಬಹಿರಂಗಪಡಿಸಿದೆ. ಸದ್ಯ ಹರಿದಾಡುತ್ತಿರುವ ವದಂತಿ ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದೆ. ಲಸಿಕೆಗಳು 100 ಪರ್ಸೆಂಟ್ ಸುರಕ್ಷಿತವೆಂದು ಒತ್ತಿ ಹೇಳುತ್ತಿದೆ. ಇಂತಹ ವದಂತಿಗಳನ್ನು ನಂಬಿ ಲಸಿಕೆ ಹಾಕಿಸಿಕೊಳ್ಳದೇ ಆರೋಗ್ಯಕ್ಕೆ ಕುತ್ತು ತಂದುಕೊಳ್ಳಬೇಡಿ ಎಂದು ಸೂಚಿಸಿದೆ. ಸಮಾಜವನ್ನು ದಾರಿ ತಪ್ಪಿಸುವ ಮತ್ತು ಭೀತಿಯುಂಟು ಮಾಡುವ ವದಂತಿಗಳನ್ನು ಹರಡಿಸದಂತೆ ಜನರಲ್ಲಿ ಕೇಳಿ ಕೊಂಡಿದೆ.