ಎರ್ನಾಕುಲಂ(ಕೇರಳ): ಕೊಚ್ಚಿಯ ಕಲಮಸ್ಸೆರಿಯ ಕನ್ವೆನ್ಷನ್ ಸೆಂಟರ್ ಆಯೋಜಿಸಿದ್ದ ಪ್ರಾರ್ಥನಾ ಸಭೆಯಲ್ಲಿ ಇತ್ತೀಚೆಗೆ ಸಂಭವಿಸಿದ್ದ ಸ್ಫೋಟದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಮೊಲಿ ಜಾಯ್ (61) ಎಂಬ ಮಹಿಳೆ ಇಂದು ಮುಂಜಾನೆ 5:08ಕ್ಕೆ ನಿಧನರಾಗಿದ್ದಾರೆ. ಈ ಮೂಲಕ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಶೇ.80ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಮೊಲಿ ಜಾಯ್ ಅವರನ್ನು ರಾಜಗಿರಿ ಆಸ್ಪತ್ರೆಯಿಂದ ಕಲಮಸ್ಸೆರಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿತ್ತು. ತುರ್ತು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅಕ್ಟೋಬರ್ 29ರಂದು ಕರುಪ್ಪಂಪಾಡಿ ಮೂಲದ ಲಿಯೋನಾ ಮತ್ತು ಶೇ.90 ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದ ತೊಡುಪುಳದ ಮೀನಾಕುಮಾರಿ ಅವರು ಅದೇ ದಿನ ಸಂಜೆ ಕಲಮಸ್ಸೆರಿ ವೈದ್ಯಕೀಯ ಕಾಲೇಜಿನಲ್ಲಿ ಕೊನೆಯುಸಿರೆಳೆದಿದ್ದರು. ಮರುದಿನ ಹನ್ನೆರಡು ವರ್ಷದ ಲಿಬ್ನಾ ಕೂಡ ಕಲಮಸ್ಸೆರಿ ವೈದ್ಯಕೀಯ ಕಾಲೇಜಿನಲ್ಲಿ ಸಾವಿಗೆ ಶರಣಾಗಿದ್ದರು. ಸ್ಫೋಟದಲ್ಲಿ ಒಟ್ಟು 52 ಜನರು ಗಾಯಗೊಂಡಿದ್ದರು.
ಯೂಟ್ಯೂಬ್ ನೋಡಿ ಐಇಡಿ ಸ್ಫೋಟಕ ತಯಾರಿ ಕಲಿತೆ: ಈ ನಡುವೆ ಡೊಮಿನಿಕ್ ಮಾರ್ಟಿನ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬ ಈ ಸರಣಿ ಸ್ಫೋಟದ ಹೊಣೆ ಹೊತ್ತುಕೊಂಡಿದ್ದು, ಸದ್ಯಕ್ಕೆ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈ ಕೃತ್ಯದ ಹಿಂದೆ ಬೇರೆ ಯಾರೂ ಇಲ್ಲ, ಸ್ವತಃ ತಾನೇ ಯೋಜಿಸಿ ಕಾರ್ಯಗತಗೊಳಿಸಿದ್ದಾಗಿ ಆತ ಪೊಲೀಸ್ ವಿಚಾರಣೆಯಲ್ಲಿ ಹೇಳಿಕೆ ನೀಡಿದ್ದ. ಯೂಟ್ಯೂಬ್ ನೋಡುವ ಮೂಲಕ ಐಇಡಿ ಸ್ಫೋಟಕಗಳನ್ನು ಹೇಗೆ ತಯಾರಿಸಬೇಕೆಂದು ಕಲಿತಿದ್ದೇನೆ ಎಂದು ಬಹಿರಂಗಪಡಿಸಿದ್ದಾನೆ. ಈ ಮಾಹಿತಿ ನಿಜ ಎಂದು ಪೊಲೀಸರೂ ಕೂಡ ಖಚಿತಪಡಿಸಿದ್ದಾರೆ. ಎರ್ನಾಕುಲಂ ಪ್ರಿನ್ಸಿಪಲ್ ಸೆಷನ್ಸ್ ಕೋರ್ಟ್ ಆರೋಪಿಗೆ ಒಂದು ತಿಂಗಳ ಕಾಲ ರಿಮಾಂಡ್ ನೀಡಿದೆ.
ಇದನ್ನೂ ಓದಿ: ಕೇರಳ ಪ್ರಾರ್ಥನಾ ಸಭೆಯಲ್ಲಿ ಸ್ಫೋಟ ಪ್ರಕರಣ : ಘಟನೆಯ ಹೊಣೆ ಹೊತ್ತು ಪೊಲೀಸರಿಗೆ ಶರಣಾದ ವ್ಯಕ್ತಿ
ಇನ್ನು ಅಥಣಿಯಲ್ಲಿ ನಡೆದ ಸಾಕ್ಷ್ಯ ಸಂಗ್ರಹದ ವೇಳೆ ಪೊಲೀಸರಿಗೆ ಮಹತ್ವದ ಸಾಕ್ಷ್ಯ ಸಿಕ್ಕಿದೆ. ಐಇಡಿ ತಯಾರಿಸಲು ಬಳಸಿದ ಬ್ಯಾಟರಿ ಮತ್ತು ತಂತಿ ಪತ್ತೆಯಾಗಿದೆ. ಪೆಟ್ರೋಲ್ ಬಾಟಲ್ ಕೂಡ ಲಭ್ಯವಾಗಿದೆ. ಸ್ಫೋಟ ಸಂಭವಿಸಿದಾಗ 2,000ಕ್ಕೂ ಹೆಚ್ಚು ಜನರು ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆ ಅಕ್ಟೋಬರ್ 29ರ ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಮೊದಲ ಸ್ಫೋಟ ಸಂಭವಿಸಿತು. ಒಂದು ಗಂಟೆ ಬಳಿಕ ಮತ್ತೆ ಸರಣಿ ಸ್ಫೋಟಗಳು ಸಂಭವಿಸಿದ್ದವು.
ಇದನ್ನೂ ಓದಿ: ಕೇರಳ ಸ್ಫೋಟ : ಸಾವಿನ ಸಂಖ್ಯೆ 2 ಕ್ಕೇರಿಕೆ, 52 ಮಂದಿಗೆ ತೀವ್ರ ಗಾಯ, 6 ಜನರ ಸ್ಥಿತಿ ಚಿಂತಾಜನಕ