ಛಾಪ್ರಾ: ಬಿಹಾರದ ಛಾಪ್ರಾದಲ್ಲಿ ವಿಷಪೂರಿತ ಮದ್ಯ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಲೇ ಇದ್ದು, ಇದುವರೆಗೆ 71 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರೆಲ್ಲರೂ ಸರನ್‌ನ ಮಶ್ರಕ್, ಮಧುರಾ, ಇಸುಪುರ್ ಮತ್ತು ಅಮ್ನೌರ್ ಪ್ರದೇಶದವರಾಗಿದ್ದಾರೆ.
ಪ್ರಕರಣದಲ್ಲಿ ಕುರಿತಂತೆ ಕಠಿಣ ಕ್ರಮ ಕೈಗೊಂಡಿರುವ ಪೊಲೀಸರು 200 ಕಳ್ಳಸಾಗಣೆದಾರರನ್ನು ಬಂಧಿಸಿದ್ದಾರೆ. ಇನ್ನೂ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಛಾಪ್ರಾ ಸದರ್ ಆಸ್ಪತ್ರೆ, ಪಿಎಂಸಿಹೆಚ್ ಮತ್ತು ಎನ್ಎಂಸಿಹೆಚ್ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಬಗ್ಗೆ ವಿಧಾನಸಭೆಯಲ್ಲಿ ಸ್ಪಷ್ಟನೆ ನೀಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಮದ್ಯ ಸೇವಿಸಿ ಸತ್ತವರಿಗೆ ಪರಿಹಾರ ನೀಡುವುದಿಲ್ಲ. ಕುಡಿತದ ಪರವಾಗಿ ಮಾತನಾಡುವವರಿಂದ ನಿಮಗೆ ಒಳಿತಾಗುವುದಿಲ್ಲ ಎಂದಿದ್ದಾರೆ. ಅಲ್ಲದೆ, ಕಳೆದ ತಿಂಗಳು ಗುಜರಾತ್ ನಡೆದ ಮೋರ್ಬಿ ಸೇತುವೆ ದುರಂತದ ಬಗ್ಗೆ ಉಲ್ಲೇಖಿಸಿದ ನಿತೀಶ್, ಬಿಜೆಪಿ ಆಡಳಿತವಿಲ್ಲದ ರಾಜ್ಯಗಳ ಬಗ್ಗೆ ಮಾತ್ರ ಮಾಧ್ಯಮಗಳಲ್ಲಿ ಅನ್ಯಾಯದ ಚಿತ್ರಣ ಸಿಕ್ಕಿದೆ ಎಂದು ಟೀಕಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, 'ನಾಲ್ಕು ತಿಂಗಳ ಹಿಂದೆ ಬಿಜೆಪಿ ಸಚಿವರ ಸಂಬಂಧಿಕರ ಮನೆಯಲ್ಲಿ ಮದ್ಯ ಪತ್ತೆಯಾದಾಗ ಬಿಜೆಪಿ ಎಲ್ಲಿತ್ತು? ಕಳೆದ 4 ವರ್ಷಗಳಲ್ಲಿ ಗುಜರಾತ್‌ನಲ್ಲಿ ಬಿಹಾರಕ್ಕಿಂತ ಹೆಚ್ಚು ಸಾವುಗಳು ಸಂಭವಿಸಿವೆ. ಗುಜರಾತ್‌ನಲ್ಲಿ ನಕಲಿ ಮದ್ಯ ಸೇವಿಸಿ 50 ಮಂದಿ ಸಾವನ್ನಪ್ಪಿದ್ದಾರೆ., ಹೀಗಾಗಿ ದೇಶದ ಪ್ರಧಾನಿ ಮತ್ತು ಗೃಹ ಸಚಿವರು ಇದರ ಹೊಣೆ ಹೊತ್ತು ರಾಜೀನಾಮೆ ನೀಡುತ್ತಾರೆಯೇ?' ಎಂದು ಪ್ರಶ್ನಿಸಿದ್ದಾರೆ.
ನಕಲಿ ಮದ್ಯ ದುರಂತದ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಬಿಹಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದೆ. ಪೊಲೀಸರು ದಾಖಲಿಸಿರುವ ಎಫ್‌ಐಆರ್, ಆಸ್ಪತ್ರೆಗೆ ದಾಖಲಾದ ಸಂತ್ರಸ್ತರಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ಪರಿಹಾರ ಕುರಿತಂತೆ ವಿವರವಾದ ವರದಿ ನೀಡುವಂತೆ ತಾಕೀತು ಮಾಡಿದೆ.
ಇದನ್ನೂ ಓದಿ.. ಮನೆಗೆ ಆಕಸ್ಮಿಕ ಬೆಂಕಿ.. ಮಕ್ಕಳು, ಮಹಿಳೆಯರು ಸೇರಿ ಒಂದೇ ಕುಟುಂಬದ ಆರು ಜನ ಸಜೀವ ದಹನ