ಚೆನ್ನೈ: ಭಾರತದಲ್ಲಿ ತಯಾರಾಗುತ್ತಿರುವ ಕಣ್ಣಿನ ಔಷಧ ಬಳಕೆಯಿಂದಾಗಿ ಅಮೆರಿಕದಲ್ಲಿ ಸುಮಾರು 50 ಮಂದಿಯಲ್ಲಿ ಅನಾರೋಗ್ಯ ಕಂಡು ಬಂದಿದ್ದು, ಈ ಔಷಧ ಬಳಕೆ ಮಾಡದಂತೆ ಸೂಚನೆ ನೀಡಿದೆ. ಸದ್ಯ ವಿವಾದ ಕೇಂದ್ರ ಬಿಂದುವಾಗಿರುವ ಈ ಔಷಧದ ಉತ್ಪಾದನಾ ಘಟಕಕ್ಕೆ ನಿನ್ನೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸೆಂಟ್ರಲ್ ಡ್ರಗ್ಸ್ ಸ್ಟಾಂಡರ್ಡ್ ಕಂಟ್ರಲ್ ಅರ್ಗನೈಸೇಶನ್) ತಂಡ ಭೇಟಿ ನೀಡಿದ್ದು ತನಿಖೆಗೆ ಮುಂದಾಗಿದೆ. ತಮಿಳುನಾಡಿನ ಚೆಂಗಲಪಟ್ಟು ಜಿಲ್ಲೆಯ ತಿರುಪೊರುರ್ ಸಮೀಪದ ಆಲ್ತುರ್ನಲ್ಲಿ ಗ್ಲೋಬಲ್ ಹೇಲ್ತ್ ಕೇರ್ ಕಂಪನಿ ಉತ್ಪಾದಿಸುತ್ತಿರುವ ಕಣ್ಣಿನ ಔಷಧ (ಐ ಡ್ರಾಪ್) ಬಳಕೆಯಿಂದ ಅಮೆರಿಕದಲ್ಲಿ ಜನರು ಸಾವನ್ನಪ್ಪಿದ್ದು, ಇದೀಗ ಈ ಔಷಧ ವಿವಾದದ ಕೇಂದ್ರ ಬಿಂದುವಾಗಿದೆ.
ಗ್ಲೋಬಲ್ ಹೇಲ್ತ್ಕೇರ್ ಕಂಪನಿಯ ಔಷಧ ಉತ್ಪಾದನಾ ಕೇಂದ್ರ ಆಲ್ತುರ್ನಲ್ಲಿ ನಡೆಯುತ್ತಿದೆ. ಇಲ್ಲಿ ಉತ್ಪಾದನೆಯಾಗುತ್ತಿದೆ. ಈ ಔಷಧಗಳನ್ನು ಎರಡು ಅಮೆರಿಕ ಕಂಪನಿಗಳು ಯುನೈಟೆಡ್ ಸ್ಟೇಟ್ಸ್ನಾದ್ಯಂತ ವಿತರಣೆ ಮಾಡುತ್ತಿದೆ. ಈ ಔಷಧಗಳ ಬಳಕೆಯಿಂದ ಅನೇಕರು ತೊಂದರೆಗೆ ಒಳಗಾಗುತ್ತಿದ್ದಾರೆ ಎಂಬ ವರದಿಯಾಗಿದೆ.
ಔಷಧ ಬಳಸದಂತೆ ಸೂಚನೆ: ಇನ್ನು ಈ ಔಷಧ ಬಳಕೆ ಮಾಡಿದ ಇಬ್ಬರು ಸಾವನ್ನಪ್ಪಿದ್ದಾರೆ. ಐದು ಮಂದಿಗೆ ಕಣ್ಣಿನ ಹಾನಿಯಾಗಿದೆ. 50ಕ್ಕೂ ಅಧಿಕ ಮಂದಿ ದೈಹಿಕ ಸಮಸ್ಯೆಗಳಿಗೆ ಒಳಗಾಗಿದ್ದಾರೆ. ಈ ಕುರಿತು ಅಮೆರಿಕ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ, ಈ ಕಣ್ಣಿನ ಔಷಧ ಬಳಸಿದ ವ್ಯಕ್ತಿಗಳ ದೇಹದಲ್ಲಿ ಅನೇಕ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ. ಇದು ಅನೇಕ ಗಂಭೀರ ಸಮಸ್ಯೆಗೆ ಕಾರಣವಾಗಬಹುದು. ಈ ರೀತಿಯ ಬ್ಯಾಕ್ಟೀರಿಯಾಗಳು ಅಮೆರಿಕದಲ್ಲಿ ಈ ಹಿಂದೆ ಪತ್ತೆಯಾಗಿಲ್ಲ. ಈ ಹಿನ್ನೆಲೆ ಈ ಕಣ್ಣಿನ ಔಷಧ ಬಳಕೆ ಮಾಡದಂತೆ ಅಮೆರಿಕ ಸರ್ಕಾರ ಜನರಿಗೆ ಸೂಚನೆ ನೀಡಿದೆ.
50ಕ್ಕೂ ಹೆಚ್ಚು ಮಂದಿಗೆ ಹಾನಿ ಈ ಕಣ್ಣಿನ ಔಷಧ ಬಳಕೆ ಮಾಡಿದವರಲ್ಲಿ ಸೋಂಕು, ದೃಷ್ಟಿ ಕಳೆದುಕೊಳ್ಳುವುದು ಮತ್ತು ಈ ಸೋಂಕು ರಕ್ತಕ್ಕೆ ಪ್ರವೇಶಿಸಿ ಸಾವನ್ನಪ್ಪುತ್ತಿರುವ ಬಗ್ಗೆ 50ಕ್ಕೂ ಹೆಚ್ಚು ಪ್ರಕರಣಗಳು ಕಂಡು ಬಂದಿದೆ. ಈ ಪ್ರಕರಣಗಳು ವರದಿಯಾದ ಬೆನ್ನಲ್ಲೇ ತಮಿಳುನಾಡು ಮೂಲದ ಗ್ಲೋಬಲ್ ಹೆಲ್ತ್ ಕೇರ್ ಔಷಧ ಕಂಪನಿ ಅಮೆರಿಕದಿಂದ ತಮ್ಮ ಔಷಧಿಗಳನ್ನು ಸ್ವಯಂ ಹಿಂಪಡೆದಿದೆ. ಅಮೆರಿಕದ ಆಹಾರ ಮತ್ತು ಔಷಧ ಆಡಳಿತ, ದೇಶದಲ್ಲಿ ಈ ಔಷಧಗಳ ಮಾರಾಟ ಮಾಡದಂತೆ ಮತ್ತು ಬಳಸದಂತೆ ಜನರಿಗೆ ತಿಳಿಸಿದ್ದಲ್ಲದೆ, ಪ್ರಕಟಣೆ ಹೊರಡಿಸಿದೆ.
ಮಧ್ಯರಾತ್ರಿ ದಾಳಿ ನಡೆಸಿದ ತಂಡ: ಅಲ್ಲದೇ ಕೇಂದ್ರ ಮತ್ತು ರಾಜ್ಯದ ಔಷಧ ನಿಯಂತ್ರ ಇನ್ಸ್ಪೆಕ್ಟರ್ ಒಳಗೊಂಡ ಆರು ಜನರ ತಂಡ ನಿನ್ನೆ ಮಧ್ಯರಾತ್ರಿ ಸುಮಾರು 2 ಗಂಟೆಗೆ ಔಷಧ ಘಟಕಕ್ಕೆ ಭೇಟಿ ನೀಡಿದ್ದು, ತನಿಖೆ ನಡೆಸಿದೆ. ಈ ಕುರಿತು ಮಾತನಾಡಿರುವ ತಂಡ ಅಮೆರಿಕಕ್ಕೆ ಕಳುಹಿಸಿದ ಔಷಧದ ಸ್ಯಾಂಪಲ್ ಪಡೆಯಲಾಗಿದ್ದು, ಇದನ್ನು ಪರೀಕ್ಷೆಗೆ ಒಳಪಡಿಸಿ, ಈ ಕುರಿತು ವಿವರವಾದ ವರದಿಯನ್ನು ಸರ್ಕಾರಕ್ಕೆ ನೀಡಲಾಗುವುದು ಎಂದು ತಿಳಿಸಿದೆ.
ಇದನ್ನೂ ಓದಿ: ಸತತ ಮೂರನೇ ಬಾರಿ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ ಪ್ರಧಾನಿ ಮೋದಿ