ಅಲಿಗಢ: ಅನಾರೋಗ್ಯದಿಂದ ತಾಯಿ ಮೃತಪಟ್ಟಾಗ, ದುಡ್ಡಿಲ್ಲದ ಕಾರಣದಿಂದ ಮಗಳು ತಾಯಿಯ ಅಂತ್ಯಸಂಸ್ಕಾರಕ್ಕೆ ಬರಲಾಗದೆ ವಿಡಿಯೊ ಕಾಲ್ ಮೂಲಕ ಕೊನೆಯ ಬಾರಿ ತಾಯಿಯ ದರ್ಶನ ಮಾಡಿದ ಮನಕಲಕುವ ಘಟನೆ ಅಲಿಘಡನಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದಿಂದ ಕೂಲಿ ಮಾಡಿ ಜೀವನ ಸಾಗಿಸಲು ಬಂದಿದ್ದ ಮಹಿಳೆ ಅನಾರೋಗ್ಯದಿಂದ ಜೆಎನ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದರು. ಆದರೆ ಮೃತಳ ಪುತ್ರಿಗೆ ಅಲ್ಲಿಗೆ ಬರಲು ಸಾಧ್ಯವಾಗಿಲ್ಲ. ಹಣ ಇಲ್ಲದ ಕಾರಣದಿಂದ ಬರಲಾಗುತ್ತಿಲ್ಲ ಎಂದು ಆಕೆ ಪೊಲೀಸರಿಗೆ ಹೇಳಿದ್ದಾಳೆ. ನಂತರ ಪೊಲೀಸರು ಮೃತಳ ಶವವನ್ನು ಅಂತಿಮ ವಿಧಿವಿಧಾನಕ್ಕಾಗಿ ಮಾನವ ಉಪಕಾರ್ ಹೆಸರಿನ ಸಂಸ್ಥೆಗೆ ಹಸ್ತಾಂತರಿಸಿದ್ದಾರೆ. ಈ ಸಂಸ್ಥೆಯವರು ಮೃತಳ ಅಂತ್ಯಸಂಸ್ಕಾರ ನೆರವೇರಿಸಿದ್ದು ಮಾತ್ರವಲ್ಲದೆ, ಅಂತ್ಯಸಂಸ್ಕಾರದ ದೃಶ್ಯಾವಳಿಯನ್ನು ವಿಡಿಯೊ ಕಾಲ್ ಮೂಲಕ ಮಗಳಿಗೆ ತೋರಿಸಿದ್ದಾರೆ. ಈ ವೇಳೆ ತಾಯಿಯ ಮುಖ ನೋಡಿ ಮಗಳು ರೋದಿಸುತ್ತಿದ್ದ ದೃಶ್ಯ ಎಂಥವರ ಮನಸನ್ನೂ ಕಲಕುವಂತಿತ್ತು.
ನವೆಂಬರ್ 16 ರಂದು ಜೆಎನ್ ಮೆಡಿಕಲ್ ಕಾಲೇಜಿನಲ್ಲಿ ಮಹಿಳೆಯೊಬ್ಬರ ಮೃತದೇಹ ಇರುವುದಾಗಿ ಭಾನುವಾರ ಸಿವಿಲ್ ಲೈನ್ ಪೊಲೀಸ್ ಠಾಣೆಯಿಂದ ಮಾನವ್ ಉಪಕಾರ್ ಸಂಸ್ಥೆಯ ಸಂಸ್ಥಾಪಕ ವಿಷ್ಣು ಕುಮಾರ್ ಬಂಟಿ ಅವರಿಗೆ ದೂರವಾಣಿ ಮೂಲಕ ತಿಳಿಸಲಾಗಿತ್ತು. ಮೃತ ಮಹಿಳೆಯ ಮೊಬೈಲ್ ಫೋನ್ ಪತ್ತೆಯಾಗಿದ್ದು, ಅದರ ಆಧಾರದ ಮೇಲೆ ಮಹಿಳೆಯನ್ನು ಪಶ್ಚಿಮ ಬಂಗಾಳದ ಶಿಘುಲ್ಕುಶಿ ಜಿಲ್ಲೆಯ ಕುಶ್ ವಿಹಾರ್ ನಿವಾಸಿ ಬುಲ್ಬುಲಿ ಪತ್ನಿ ಸ್ವಾವಿಪುಲ್ ಬರ್ಮನ್ ಎಂದು ಗುರುತಿಸಲಾಗಿದೆ. ಈ ಫೋನ್ ನೆರವಿನಿಂದ ಮೃತಳ ಮಗಳನ್ನು ಮಾತನಾಡಿಸಿದಾಗ, ಹಣದ ಕೊರತೆಯಿಂದ ತನಗೆ ಮಗಳು ಬರಲು ಸಾಧ್ಯವಾಗುತ್ತಿಲ್ಲ ಎಂದಿದ್ದಾಳೆ. ಬಳಿಕ ಮಹಿಳೆಯ ಮೃತದೇಹದ ಅಂತಿಮ ಸಂಸ್ಕಾರ ನಡೆಸುವಂತೆ ಮಾನವ್ ಉಪಕಾರ್ ಸಂಸ್ಥೆಗೆ ಪೊಲೀಸರು ಸೂಚಿಸಿದ್ದರು.
ಮಾನವ್ ಉಪಕಾರ್ ಸಂಸ್ಥೆಯ ಅಧ್ಯಕ್ಷ ವಿಷ್ಣುಕುಮಾರ್ ಬಂಟಿ ಅವರು ನಿಯಮಾನುಸಾರ ಮೃತದೇಹವನ್ನು ಭಾನುವಾರ ನುಮಾಯಿಷ್ ಮೈದಾನದಲ್ಲಿರುವ ಮುಕ್ತಿಧಾಮಕ್ಕೆ ತರುವಂತೆ ಹೇಳಿ ಸಿದ್ಧತೆ ಆರಂಭಿಸಿದ್ದರು. ಇದೇ ವೇಳೆ ಮೃತರ ಪುತ್ರಿ ವಿಪ್ಲಿ ಬರ್ಮನ್‌ನಿಂದ ಕಾನ್ಸ್‌ಟೇಬಲ್ ನವೀನ್ ಕುಮಾರ್ ಅವರ ಮೊಬೈಲ್‌ಗೆ ಕರೆ ಬಂದಿದ್ದು, ತಾಯಿಯ ಅಂತಿಮ ದರ್ಶನ ಪಡೆಯಬೇಕೆಂದು ಕೇಳಿಕೊಂಡಿದ್ದಾಳೆ. ನಂತರ ಕಾನ್ ಸ್ಟೆಬಲ್ ನವೀನ್ ಕುಮಾರ್ ಮಾನವ್ ಉಪಕಾರ್ ಸಂಸ್ಥೆಯ ಮುಖ್ಯಸ್ಥರಿಗೆ ಇದೇ ಮನವಿಯನ್ನು ತಲುಪಿಸಿದರು.
ತಾಯಿಯ ಅಂತ್ಯಸಂಸ್ಕಾರಕ್ಕೆ ಏಕೆ ಬರುತ್ತಿಲ್ಲ ಎಂದು ಮಾನವ್ ಉಪಕಾರ್ ಸಂಸ್ಥೆಯ ಅಧ್ಯಕ್ಷರು ಈ ಸಂದರ್ಭದಲ್ಲಿ ಮಗಳಿಗೆ ಫೋನ್ ಮಾಡಿ ಕೇಳಿದರು. ಆಗ, ತಾನು ತನ್ನ ತಾಯಿಯ ಮನೆಯಲ್ಲೇ ಇದ್ದು, ಸದ್ಯ ಗರ್ಭಿಣಿಯಾಗಿರುವೆ. ನನ್ನ ಪತಿ ಕೂಲಿ ಮಾಡುತ್ತಾರೆ. ಹೆರಿಗೆ ಮಾಡಿಸಲೂ ಹಣವಿಲ್ಲದ ಕಾರಣದಿಂದ ತಾಯಿ ಆ ಹಣ ಹೊಂದಿಸಲು ನೊಯ್ಡಾಗೆ ದುಡಿಮೆಗೆ ಹೋಗಿದ್ದರು. ಆದರೆ ಆಕೆ ಅನಾರೋಗ್ಯದಿಂದ ಅಲ್ಲಿ ಮೃತಪಟ್ಟಿದ್ದಾರೆ ಎಂದು ಮಗಳು ತನ್ನ ಕರುಣಾಜನಕ ಕತೆ ಹೇಳಿದ್ದಾಳೆ.
ಹೀಗಾಗಿ ಪೊಲೀಸರು ಮತ್ತು ಮಾನವ್ ಉಪಕಾರ್ ಸಂಸ್ಥೆಯ ಸಹಾಯದಿಂದ ಮಗಳು ಕೊನೆಗೆ ವಿಡಿಯೋ ಕಾಲಿಂಗ್ ಮೂಲಕ ತಾಯಿಯ ಅಂತಿಮ ದರ್ಶನ ಪಡೆದಳು.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಸಿನಿಮೀಯ ಘಟನೆ.. 22 ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗಳು..