ಡುಂಗರ್‌ಪುರ(ರಾಜಸ್ಥಾನ): ಜಗತ್ತು ಎಷ್ಟೇ ಮುಂದುವರೆದರೂ ಗ್ರಾಮೀಣ ಭಾಗದಲ್ಲಿ ಮೂಢನಂಬಿಕೆ ಇವತ್ತಿಗೂ ಜೀವಂತವಾಗಿದೆ. ರಾಜಸ್ಥಾನದ ಡುಂಗರ್‌ಪುರ ಪ್ರದೇಶದಲ್ಲಿ ಅಂತಹದ್ದೊಂದು ಘಟನೆ ನಡೆದಿದೆ. 15 ವರ್ಷದ ಬಾಲೆಯೋರ್ವಳು 7 ವರ್ಷದ ಸಹೋದರಿಯ ಕತ್ತು ಸೀಳಿರುವ ಘಟನೆ ನಡೆದಿದೆ. ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.
ಡುಂಗರ್‌ಪುರ ಜಿಲ್ಲೆಯ ಚಿಟಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಜಿಂಜ್ವಾ ಫಲಾ ಗ್ರಾಮದಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ. ದಶ ಮಾತಾ ವ್ರತ ಹಬ್ಬದಲ್ಲಿ 15 ವರ್ಷದ ಬಾಲಕಿ ಕತ್ತಿಯಿಂದ ಕೇವಲ 7 ವರ್ಷದ ಬಾಲಕಿಯ ರುಂಡ ಕತ್ತರಿಸಿದ್ದಾಳೆ. ಮತ್ತೋರ್ವನನ್ನೂ ಗಾಯಗೊಳಿಸಿದ್ದಾಳೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ರಾಮ್‌ಜಿ ದೆಂದೋರ್ ಎಂಬುವವರ ಮನೆಯಲ್ಲಿ ದಶಮಾತೆಯ ಮೂರ್ತಿ ಪ್ರತಿಷ್ಠಾಪಿಸಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪೂಜಿಸಲಾಗುತ್ತದೆ. ಸುತ್ತಮುತ್ತಲಿನ ಜನರೆಲ್ಲ ದರ್ಶನಕ್ಕಾಗಿ ಅಲ್ಲಿಗೆ ಬರುತ್ತಾರೆ. ಭಾನುವಾರ ರಾತ್ರಿ ಎಂದಿನಂತೆ ರಾತ್ರಿ 8 ಗಂಟೆಗೆ ಆರಾಧನಾ ಕಾರ್ಯಕ್ರಮ ಆರಂಭವಾಗಿದೆ. ಈ ನಡುವೆ ಬಾಲಕಿ ಕೈಯಲ್ಲಿ ಕತ್ತಿ ಹಿಡಿದು ಎಲ್ಲರನ್ನೂ ಸಾಯಿಸುತ್ತೇನೆಂದು ಕೂಗಲು ಶುರು ಮಾಡಿ, ಮನೆಯ ಅಂಗಳದ ತುಂಬೆಲ್ಲ ಓಡಾಡಿದ್ದಾಳೆ. ಆಕೆಯನ್ನು ಹಿಡಿಯಲು ಶಂಕರ್ ಹಾಗೂ ಆತನ ಹಿರಿಯ ಸಹೋದರ ಸುರೇಶ್ ಪ್ರಯತ್ನಿಸಿದಾಗ ಕತ್ತಿಯಿಂದ ಹಲ್ಲೆ ನಡೆಸಿದ್ದಾಳೆ. ಮನೆಯ ಒಳಗೆ ಮಲಗಿದ್ದ ಸುರೇಶ್ ಪುತ್ರಿ ಪುಷ್ಪಾ ಮೇಲೆ ಹಲ್ಲೆ ನಡೆಸಿ, ಕುತ್ತಿಗೆ ಕತ್ತರಿಸಿದ್ದಾಳೆ. ಇದರ ನಂತರ ಕೂಡ ಆಕೆಯ ದೇಹದ ಮೇಲೆ ಅನೇಕ ಸಹ ದಾಳಿ ನಡೆಸಿದ್ದಾಳೆ.
ಇದನ್ನೂ ಓದಿ: ಗುಜರಾತ್ನಲ್ಲಿ ಅಧಿಕಾರಕ್ಕೆ ಬಂದ್ರೆ ನಿರುದ್ಯೋಗಿಗಳಿಗೆ ತಿಂಗಳಿಗೆ ₹3 ಸಾವಿರ: ಕೇಜ್ರಿವಾಲ್ ಆಫರ್
ಇದಾದ ಬಳಿಕ ಮನೆಯರೆಲ್ಲರೂ ಸೇರಿಕೊಂಡು ಬಾಲಕಿಯನ್ನು ಹಿಡಿದಿದ್ದಾರೆ. ಘಟನೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಚಿತಾರಿ ಪೊಲೀಸ್ ಠಾಣೆಯ ಅಧಿಕಾರಿ ಗೋವಿಂದ್ ಸಿಂಗ್ ಸ್ಥಳಕ್ಕಾಗಮಿಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.