ಎಟಾ (ಉತ್ತರ ಪ್ರದೇಶ): ಎಟಾ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಪೂಜೆ ಸಲ್ಲಿಸಲು ನಮ್ಮ ಸಮುದಾಯದ ಅವಕಾಶ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ ತಳ ಸಮುದಾಯದ ಜನತೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಹಳ ಹೊತ್ತಿನವರೆಗೆ ಪ್ರತಿಭಟನೆ ನಡೆಸಿದರು.
ಎಟಾ ಜಿಲ್ಲೆಯ ವಿಕಾಸಖಂಡ್ ಮಾರಹರಾ ಪ್ರದೇಶದ ಮಿರಹಚಿ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೇಲ್ಜಾತಿಯ ಜನರು ಕೆಳಜಾತಿಯ ಜನರಿಗೆ ದೇವಸ್ಥಾನದಲ್ಲಿ ಪೂಜೆ ಮಾಡಲು ಅಡ್ಡಿ ಪಡಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಗ್ರಾಮದ ನಿವಾಸಿಗಳೇ ಆಗಿರುವ ದಯಾಶಂಕರ ಸೇರಿದಂತೆ ಆತನ ಸಹಚರರು ದೇವಸ್ಥಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಜಾಟವ್ ಸಮಾಜದವರು ಆರೋಪಿಸಿದರು.
ಮಂದಿರದ ಆಶ್ರಮವನ್ನು ಮೇಲ್ಜಾತಿಯ ಜನ ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ. ಜಾಟವ್ ಸಮುದಾಯದವರು ದೇವಸ್ಥಾನದ ಆವರಣದಲ್ಲಿ ನೆಟ್ಟಿದ್ದ ಗಿಡ ಮರಗಳನ್ನು ಸಹ ಅವರು ಕತ್ತರಿಸಿದ್ದಾರೆ. ಇದೆಲ್ಲವೂ ಮೇಲ್ಜಾತಿಯವರ ಕೆಲಸವಾಗಿದ್ದು, ಅವರು ಪೂಜೆ ಮಾಡುವಾಗ ನಮ್ಮನ್ನು ಒಳಗೆ ಬಿಡುವುದಿಲ್ಲ ಎಂದು ಜಾಟವ್ ಸಮುದಾಯದವರು ಆರೋಪಿಸಿದ್ದಾರೆ.
ವಿವಾದದ ಬಗ್ಗೆ ಮಾತನಾಡಿದ ಮಂದಿರದ ಪೂಜಾರಿ ಮಥುರಾ ಪ್ರಸಾದ್, ದೇವಸ್ಥಾನವು ಸರ್ಕಾರಿ ಭೂಮಿಯಲ್ಲಿ ನಿರ್ಮಾಣವಾಗಿದ್ದು, ಇಲ್ಲೊಂದು ಆಶ್ರಮವನ್ನೂ ನಿರ್ಮಿಸಲಾಗಿದೆ. ಗ್ರಾಮದ ಲೋಧಿ ಸಮಾಜದವರು ಕಳೆದ ಎಂಟು ದಿನಗಳಿಂದ ದೇವಸ್ಥಾನ ಹಾಗೂ ಆಶ್ರಮಗಳನ್ನು ವಶಪಡಿಸಿಕೊಂಡಿದ್ದಾರೆ. ದೇವಸ್ಥಾನದಲ್ಲಿ ಅವರು ಯಾರಿಗೂ ಪೂಜೆ ಮಾಡಲು ಬಿಡುತ್ತಿಲ್ಲ.
ನಾವು ಪೂಜೆ ಮಾಡಲು ಹೋದರೆ ನಮ್ಮೊಂದಿಗೆ ಅವರು ಅನುಚಿತವಾಗಿ ವರ್ತಿಸುತ್ತಾರೆ. ಹೀಗಾಗಿ ಗ್ರಾಮದ ಎಲ್ಲರೂ ಸೇರಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅವರಿಗೆ ಈ ಬಗ್ಗೆ ದುರು ನೀಡಿದ್ದೇವೆ ಎಂದು ತಿಳಿಸಿದರು.
ಎರಡು ದಿನಗಳ ಹಿಂದೆ 112 ನಂಬರಿಗೆ ಕರೆ ಮಾಡಿದ್ದೆವು. ಇದರ ನಂತರ ಪೊಲೀಸರು ಬಂದು ಇಬ್ಬರನ್ನು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದರು. ಆದರೆ, ಇಬ್ಬರನ್ನೂ ಮತ್ತೆ ಬಿಟ್ಟಿದ್ದಾರೆ ಎಂದು ಪೂಜಾರಿ ಹೇಳಿದರು.
ಈ ಬಗ್ಗೆ ಮಾತನಾಡಿದ ಗ್ರಾಮದ ನಿವಾಸಿ ರಾಮಸೇವಕ, ನೀವು ನನಗೆ ವೋಟ್ ನೀಡಿಲ್ಲ ಎಂದು ಈ ಕ್ಷೇತ್ರದ ಶಾಸಕ ವೀರೇಂದ್ರ ಲೋಧಿ ನಮಗೆ ಹೇಳುತ್ತಾರೆ. ಲೋಧಿ ಮತ್ತು ರಜಪೂತರ ಮತಗಳು ಮಾತ್ರ ಅವರಿಗೆ ಬಂದಿವೆ ಎಂದು ಅವರು ಹೇಳುತ್ತಾರೆ ಎಂದರು.
ಪ್ರಕರಣ ತಮ್ಮ ಗಮನಕ್ಕೆ ಬಂದಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹೇಳಿದ್ದಾರೆ. ಶಿವ ದೇವಾಲಯವನ್ನು ವಶಪಡಿಸಿಕೊಂಡಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಕಂದಾಯ ಹಾಗೂ ಪೊಲೀಸ್ ಇಲಾಖೆಯ ತಂಡ ರಚಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಸ್ಥಳೀಯಾಡಳಿತದ ಎಡಿಎಂ ತಿಳಿಸಿದ್ದಾರೆ.