ಗ್ವಾಲಿಯರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಗ್ವಾಲಿಯರ್‌ನ ಹಳ್ಳಿಯೊಂದರಲ್ಲಿ ದಲಿತ ಯುವಕರ ಮೇಲೆ ನಡೆದ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ. ದೇವಸ್ಥಾನದ ಆವರಣದಲ್ಲಿದ್ದ ಕೊಳವೆಬಾವಿ ನೀರು ಬಳಸಿದ್ದಕ್ಕೆ ದಲಿತ ಸಮುದಾಯಕ್ಕೆ ಸೇರಿದ ಇಬ್ಬರು ಯುವಕರನ್ನು ಗುಜ್ಜರ್ ಸಮುದಾಯದ ಜನರು ಥಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜಿಲ್ಲೆಯ ಪಿಚೋರ್ ಪೊಲೀಸ್ ಠಾಣೆಯಲ್ಲಿ ಎರಡೂ ಸಮುದಾಯಗಳ ಜನರು ಪ್ರಕರಣ ದಾಖಲಿಸಿದ್ದಾರೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ದಲಿತ ಕಾಲೊನಿಯಲ್ಲಿ ಭಾನುವಾರ ರಾತ್ರಿ ವಿದ್ಯುತ್ ಇಲ್ಲದ ಕಾರಣ ನೀರು ಬಿಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಯುವಕರು ದೇವಸ್ಥಾನದ ಹೊರಭಾಗದಲ್ಲಿರುವ ಕೊಳವೆಬಾವಿಗೆ ನೀರು ತರಲು ತೆರಳಿದ್ದಾರೆ. ಈ ವೇಳೆ ಇವರಿಬ್ಬರ ಮೇಲೆ ಗುಜ್ಜರ್ ಸಮುದಾಯದವರು ಹಲ್ಲೆ ನಡೆಸಿದ್ದಾರೆ. ಪಿಚೋರ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿ ಅಕ್ಬಾಯಿ ಗ್ರಾಮದಲ್ಲಿಈ ದೇಗುಲವಿದೆ.
ಹಲ್ಲೆಯನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ವಿಡಿಯೋದಲ್ಲಿ ಗ್ರಾಮದ ಮೇಲ್ವರ್ಗದವರು (ಗುಜ್ಜರ್ ಸಮುದಾಯದ ಜನರು) ಯುವಕರನ್ನು ಎಳೆದು ನಿಂದಿಸಿರುವುದು ಕಂಡುಬಂದಿದೆ. ಇದರಿಂದ ರೊಚ್ಚಿಗೆದ್ದಿರುವ ದಲಿತ ಸಮುದಾಯದವರು ಗುಜ್ಜರ್ ಸಮುದಾಯಕ್ಕೆ ಸೇರಿದ ಅರ್ಧದಷ್ಟು ಜನರ ವಿರುದ್ಧ ದೂರು ನೀಡಿದ್ದು, ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಸೇರಿದಂತೆ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 0
ತಮ್ಮ ಮೇಲಾಗಿರುವ ದೌರ್ಜ್ಯನದಿಂದ ಅಸಮಾಧಾನಗೊಂಡಿರುವ ದಲಿತರು, "ನಾವು ಕುಡಿದು ಗಲಾಟೆ ಮಾಡಿದ್ದೇವೆ ಎಂಬ ಮೇಲ್ವರ್ಗದವರ ಆರೋಪ ಸುಳ್ಳು. ಅವರು ಪೊಲೀಸರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ವಾಲಿಯರ್ ಸಿಎಸ್‌ಪಿ ವಿಜಯ್ ಭಡೋರಿಯಾ ಪ್ರತಿಕ್ರಿಯಿಸಿ, "ಪ್ರಕರಣ ದಾಖಲಿಸಲಾಗಿದೆ. ಯಾರೇ ಹೊಣೆಗಾರರಾದರೂ ಶಿಕ್ಷೆಗೆ ಗುರಿಯಾಗುತ್ತಾರೆ" ಎಂದರು.
ಗಾಯಗೊಂಡಿರುವ ಯುವಕರ ವೈದ್ಯಕೀಯ ವರದಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಹಲ್ಲೆ ನಡೆಸಿದ ಆರೋಪಿಗಳನ್ನು ಲುವ್ಬೋ ಗುರ್ಜರ್, ಲುವ್ ಕುಶ್ ಗುರ್ಜರ್, ಶ್ಯಾಮ್ ವೀರ್ ಗುರ್ಜರ್, ರಾಹುಲ್ ಗುರ್ಜರ್, ನೀರಜ್ ಗುರ್ಜರ್, ಅಂಕಿತ್ ಗುರ್ಜರ್ ಎಂದು ಗುರುತಿಸಲಾಗಿದೆ.
ದಲಿತ ವ್ಯಕ್ತಿ ಸ್ಪರ್ಶಿಸಿದ್ದಕ್ಕೆ ಮಲ ಎರಚಿ ವಿಕೃತಿ: ಮಧ್ಯಪ್ರದೇಶದ ಸಿದ್ಧಿ ಜಿಲ್ಲೆಯಲ್ಲಿ ಇತ್ತೀಚೆಗೆ ದಲಿತ ವ್ಯಕ್ತಿಯೋರ್ವ ತನ್ನನ್ನು ಸ್ಪರ್ಶಿಸಿದನೆಂದು ಕೋಪಗೊಂಡ ವ್ಯಕ್ತಿಯೋರ್ವ ಆತನ ಜಾತಿ ನಿಂದನೆ ಮಾಡಿ, ಮುಖ, ದೇಹದ ಮೇಲೆ ಮಲ ಎರಚಿರುವ ಘಟನೆ ನಡೆದಿತ್ತು. ಸಂತ್ರಸ್ತ ದಲಿತ ದಶ್ರತ್ ಘಟನೆಯಿಂದ ನೊಂದಿದ್ದು ಪೊಲೀಸ್ ಠಾಣೆಯಲ್ಲಿ ದುರು ದಾಖಲಿಸಿದ್ದರು. ದೂರಿನ ಪ್ರಕಾರ, ಅವರು ಬಿಕೌರ ಗ್ರಾಮ ಪಂಚಾಯತ್ನಲ್ಲಿ ಚರಂಡಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಆರೋಪಿ ರಾಮ್ ಕ್ರಿಪಾಲ್ ಪಟೇಲ್ ಕೂಡಾ ಅಲ್ಲಿಯೇ ಇದ್ದ ಪಂಪ್ ಬಳಿ ಸ್ನಾನ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ದಶ್ರತ್ ಅವರ ಗ್ರೀಸ್ ಅಂಟಿಕೊಂಡಿದ್ದ ಕೈ ರಾಮ್ ಕ್ರಿಪಾಲ್ ಪಟೇಲ್ಗೆ ತಾಗಿದೆ. ಇದರಿಂದ ಕೋಪಗೊಂಡ ಪಟೇಲ್, ದಶ್ರತ್ ಮೇಲೆ ಅಲ್ಲಿಯೇ ಇದ್ದ ಚೊಂಬಿನಲ್ಲಿ ಮಲವನ್ನು ತುಂಬಿಸಿಕೊಂಡು ಬಂದು ಮುಖ ಮತ್ತು ದೇಹದ ಮೇಲೆ ಎರಚಿದ್ದಾರೆ. ಅಮಾನವೀಯ ಘಟನೆಯ ಸಂಪೂರ್ಣ ಮಾಹಿತಿಗೆ ಈ ಲಿಂಕ್ ಬಳಸಿ. ದಲಿತ ವ್ಯಕ್ತಿ ಸ್ಪರ್ಶಿಸಿದ್ದಕ್ಕೆ ಕೋಪಗೊಂಡು ಮುಖ, ದೇಹದ ಮೇಲೆ ಮಲ ಎರಚಿ ವಿಕೃತಿ ಮೆರೆದ ವ್ಯಕ್ತಿ!