ರಾಯ್ಬರೇಲಿ(ಉತ್ತರ ಪ್ರದೇಶ): ದಲಿತ ವಿದ್ಯಾರ್ಥಿಯೋರ್ವನಿಗೆ ಕೆಲ ವಿದ್ಯಾರ್ಥಿಗಳು ಬೆಲ್ಟ್, ಕೇಬಲ್ನಿಂದ ಥಳಿಸಿ ಕಾಲು ನೆಕ್ಕಿಸಿರುವ ವಿಡಿಯೋ ವೈರಲ್ ಆಗಿದೆ. ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗುತ್ತಿದೆ. ನಿರ್ಜನ ಪ್ರದೇಶಕ್ಕೆ ವಿದ್ಯಾರ್ಥಿಯನ್ನು ಕರೆದುಕೊಂಡು ಹೋಗಿ, ಆತನ ಮೇಲೆ ಹಲ್ಲೆ ನಡೆಸಲಾಗಿದ್ದು, ಅದರ ವಿಡಿಯೋವನ್ನು ಖುದ್ದಾಗಿ ವೈರಲ್ ಮಾಡಿದ್ದಾರೆಂದು ಹೇಳಲಾಗ್ತಿದೆ.
ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ನೀಡಿರುವ ದೂರಿನ ಆಧಾರದ ಮೇರೆಗೆ ಪೊಲೀಸರು ಆರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇದರಲ್ಲಿ ಮೂವರ ಬಂಧನ ಮಾಡಲಾಗಿದೆ. ಪ್ರಕರಣದ ತನಿಖೆ ಆರಂಭ ಮಾಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಇತರೆ ಆರೋಪಿ ವಿದ್ಯಾರ್ಥಿಗಳಿಗೋಸ್ಕರ ಶೋಧಕಾರ್ಯ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಆನ್ಲೈನ್ ಆ್ಯಪ್ ಮೂಲಕ ₹12 ಸಾವಿರ ಸಾಲ ನೀಡಿ ಕಿರುಕುಳ; ಯುವಕ ಆತ್ಮಹತ್ಯೆ
ಈ ವಿದ್ಯಾರ್ಥಿಯ ತಾಯಿ ಹಲ್ಲೆ ಮಾಡಿರುವ ವಿದ್ಯಾರ್ಥಿಗಳ ಜಮೀನಿನಲ್ಲಿ ಕೆಲಸ ಮಾಡಿದ್ದಳಂತೆ. ಇದರ ಹಣವನ್ನು ಆತ ಕೇಳಿದ್ದಾನೆ. ಇದರಿಂದ ಆಕ್ರೋಶಗೊಂಡು ಹಲ್ಲೆ ನಡೆಸಲಾಗಿದೆ. ಏಪ್ರಿಲ್ 11ರಂದು ರಾಯ್ ಬರೇಲಿ ಜಿಲ್ಲೆಯ ಜಗತ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಹಲ್ಲೆಗೊಳಗಾದ ವಿದ್ಯಾರ್ಥಿಯ ತಾಯಿ ಮೇಲೂ ದೌರ್ಜನ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಬರೇಲಿ ಪೊಲೀಸ್ ವರಿಷ್ಠಾಧಿಕಾರಿ ಶ್ಲೋಕ್ ಕುಮಾರ್ ಮಾತನಾಡಿ, ಹಲ್ಲೆ ಮಾಡಿದವರನ್ನು ಅಭಿಷೇಕ್, ವಿಕಾಸ್, ಮಹೇಂದ್ರ ಕುಮಾರ್, ಹೃತಿಕ್ ಸಿಂಗ್, ಅಮನ್ ಸಿಂಗ್ ಮತ್ತು ಯಶ್ ಎಂದು ಗುರುತಿಸಲಾಗಿದೆ ಎಂದರು.