ಅಲಿಗಢ (ಉತ್ತರ ಪ್ರದೇಶ): ಅಲಿಗಢದ ಹಳ್ಳಿಯೊಂದರಲ್ಲಿ 17 ವರ್ಷದ ದಲಿತ ಬಾಲಕಿಯ ಅರೆಬೆತ್ತಲೆ ಶವ ಪತ್ತೆಯಾಗಿದ್ದು, ಲೈಂಗಿಕ ದೌರ್ಜನ್ಯದ ಚಿಹ್ನೆಗಳು ಮೃತದೃಹದ ಮೇಲಿವೆ. ಅಲ್ಲದೇ ಆಕೆಯ ಚರ್ಮದ ಸಿಪ್ಪೆ ಸುಲಿದಿದ್ದು, ಘಟನೆಯ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿವೆ.
ಪ್ರಕರಣವನ್ನು ಭೇದಿಸಲು ಐದು ತಂಡಗಳನ್ನು ರಚಿಸಲಾಗಿದ್ದು, ಪೊಲೀಸರು ಮಂಗಳವಾರ ವಿಚಾರಣೆಗಾಗಿ 12 ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ಭಾನುವಾರ ರಾತ್ರಿ ಅಲಿಗಢದ ಅಕ್ರಾಬಾದ್ ಪ್ರದೇಶದ ಹೊಲವೊಂದರಲ್ಲಿ ಬಾಲಕಿಯ ಶವ ಪತ್ತೆಯಾಗಿದೆ.
ಅಲಿಗಢದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಮುನಿರಾಜ್ ಜಿ. ಸುದ್ದಿಗಾರರೊಂದಿಗೆ ಮಾತನಾಡಿ, ಮರಣೋತ್ತರ ವರದಿಯಲ್ಲಿ ಕತ್ತು ಹಿಸುಕಿದ್ದರಿಂದ ಉಸಿರುಗಟ್ಟಿ ಸಾವು ಸಂಭವಿಸಿದೆ ಎಂದು ಬಹಿರಂಗಪಡಿಸಿದೆ. ಸಂತ್ರಸ್ತೆಯ ದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿವೆ. ಆಕೆಯ ಚರ್ಮದ ಸಿಪ್ಪೆ ಸುಲಿದಿದೆ. ದೇಹದ ಮೇಲೆ ಉಗುರಿನಿಂದ ಪರಿಚಿದ ಗುರುತುಗಳು ಇವೆ. ಆದರೆ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ತಂಡವು ನಡೆಸಿದ ಪ್ರಾಥಮಿಕ ಪರೀಕ್ಷೆಯಲ್ಲಿ ಯಾವುದೇ ಆಂತರಿಕ ಗಾಯ ಕಂಡುಬಂದಿಲ್ಲ. ವಿಧಿವಿಜ್ಞಾನದ ವರದಿ ಬರಬೇಕಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗಲ್ಲು ಶಿಕ್ಷೆಗೆ ಗುರಿಯಾದ ಶಬ್ನಮ್ರನ್ನು ರಾಂಪುರ್ ಜೈಲಿನಿಂದ ಬರೇಲಿ ಜೈಲಿಗೆ ಸ್ಥಳಾಂತರ: ಕಾರಣ
ಬಾಲಕಿಯ ಯೋನಿ ಮತ್ತು ಗುದನಾಳದ ಸ್ವ್ಯಾಬ್‌ಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಪೊಲೀಸರು ಐಪಿಸಿ ಸೆಕ್ಷನ್ 376 (ಅತ್ಯಾಚಾರ), 302 (ಕೊಲೆ) ರ ಅಡಿ ಎಫ್ಐಆರ್ ದಾಖಲಿಸಿದ್ದಾರೆ.
ದೂರಿನ ಪ್ರಕಾರ, ಮನೆಯಲ್ಲಿ ಆಡುಗಳಿಗೆ ಮೇವು ಸಂಗ್ರಹಿಸಲು ಬಾಲಕಿ ಬೆಳಗ್ಗೆ 11 ಗಂಟೆ ಸುಮಾರಿಗೆ ಹೊರಗೆ ತೆರಳಿದ್ದಳು. ಆದರೆ, ಸಂಜೆಯಾದರೂ ಆಕೆ ಹಿಂತಿರುಗದಿದ್ದಾಗ, ಮನೆಯವರು ಹುಡುಕಲು ಪ್ರಾರಂಭಿಸಿದರು. ಈ ವೇಳೆ ಗೋಧಿ ಹೊಲದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.