ಧರ್ಮಶಾಲಾ: ಕಾರ್ಯಕ್ರಮವೊಂದರಲ್ಲಿ ಬೌದ್ಧಧರ್ಮ ಗುರು ದಲೈಲಾಮಾ ಅವರು ಬಾಲಕನೊಂದಿಗೆ ನಡೆದುಕೊಂಡ ರೀತಿ ಟೀಕೆಗೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ಧರ್ಮಗುರುಗಳು ಬಾಲಕ ಮತ್ತು ಆತನ ಕುಟುಂಬದ ಕ್ಷಮೆ ಕೋರಿದ್ದಾರೆ. ಅಲ್ಲದೇ, "ಇದೊಂದು ತಮಾಷೆಯ ಘಟನೆಯಾಗಿತ್ತು" ಎಂದು ಸ್ಪಷ್ಟನೆ ನೀಡಿದ್ದಾರೆ.
ಜಾಗತಿಕವಾಗಿ ಮೆಚ್ಚುಗೆ ಪಡೆದ ಟಿಬೆಟಿಯನ್ ಆಧ್ಯಾತ್ಮಿಕ ಧರ್ಮಗುರು ದಲೈಲಾಮಾ ಅವರು ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಸಾರ್ವಜನಿಕವಾಗಿ ಮತ್ತು ಕ್ಯಾಮರಾಗಳ ಮುಂದೆ ತಮ್ಮನ್ನು ಭೇಟಿಯಾಗುವ ಮಕ್ಕಳ ಜೊತೆಗೆ ತಮಾಷೆಯಾಗಿ ನಡೆದುಕೊಳ್ಳುವುದು ಸಹಜ. ಬಾಲಕನೊಂದಿಗೆ ಕೀಟಲೆ ಮಾಡಲಾಗಿತ್ತು ಎಂದು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ನಾನು ನಡೆದುಕೊಂಡ ರೀತಿಯಿಂದ ನೋವುಂಟಾಗಿದ್ದರೆ ಬಾಲಕ, ಆತನ ಕುಟುಂಬ ಮತ್ತು ವಿಶ್ವದ ಎಲ್ಲ ಸ್ನೇಹಿತರಲ್ಲೂ ಕ್ಷಮೆ ಕೋರುವೆ. ಘಟನೆಗೆ ನಾನು ವಿಷಾದಿಸುತ್ತೇನೆ. ನಮ್ಮ ನಡೆಯಿಂದ ನೋವುಂಟಾಗಿದ್ದು, ಅರಿಯಲಾಗಿದೆ ಎಂದು ದಲೈಲಾಮಾ ಅವರು ಹೇಳಿಕೆ ನೀಡಿದ್ದಾರೆ.
ಘಟನೆ ಏನು?: ತಿಂಗಳ ಹಿಂದೆ ನಡೆದ ಕಾರ್ಯಕ್ರಮದಲ್ಲಿ ದಲೈಲಾಮಾ ಅವರ ಆಶೀರ್ವಾದ ಪಡೆಯಲು ಬಂದ ಬಾಲಕನ ಚುಂಬಿಸಿದ್ದ ಧರ್ಮಗುರುಗಳು ಬಳಿಕ ನಾಲಿಗೆಯನ್ನು ಸ್ಪರ್ಶಿಸಲು ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿನ ಧರ್ಮಗುರುಗಳ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಧರ್ಮಗುರುಗಳು ಬಾಲಕನ ಜೊತೆಗೆ ಹೀಗೆ ನಡೆದುಕೊಳ್ಳಬಾರದು ಎಂದು ಟೀಕೆ ಮಾಡಲಾಗಿದೆ.
ಇದನ್ನೂ ಓದಿ: ಹೆಣ್ಣು ಮಗುವಿಗಾಗಿ 138 ವರ್ಷಗಳ ಕಾಲ ಕಾದಿತ್ತು ಆ ವಂಶ.. ಬೇಬಿ ಜನನದಿಂದ ಮನೆಯಲ್ಲಿ ಸಂಭ್ರಮವೋ ಸಂಭ್ರಮ
ಸನ್ಯಾಸಿಗಳ ನಡೆಯನ್ನು ಯಾರೂ ಸಮರ್ಥಿಸಬಾರದು, ಇದೊಂದು ಯೋಗ್ಯ ನಡೆಯಲ್ಲ. ಅವರಿಂದ ಈ ರೀತಿಯ ವರ್ತನೆ ನಿರೀಕ್ಷಿಸಲಾಗದು ಎಂದು ಬಳಕೆದಾರರೊಬ್ಬರು ಕಿಡಿಕಾರಿದ್ದಾರೆ. ಇದೊಂದು ಹಳೆಯ ವಿಡಿಯೋ ಆಗಿದ್ದರೂ ಸರಿ. ಆದರೆ, ಮಕ್ಕಳ ಜೊತೆಗೆ ಇಂತಹ ವರ್ತನೆ ಅವರ ಘನತೆಗೆ ತಕ್ಕುದಲ್ಲ. ಈ ರೀತಿ ಮಾಡುವುದರಿಂದ ಅವರು ಏನು ಸಂದೇಶ ನೀಡುತ್ತಿದ್ದಾರೆ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.
ಟ್ವಿಟರ್ನಲ್ಲಿ ಪರ- ವಿರೋಧ: ಇನ್ನು ಧರ್ಮಗುರುಗಳ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ವ್ಯಕ್ತವಾಗಿದೆ. ದಲೈಲಾಮಾ ಅವರನ್ನು ಕೆಲವರು ಸಮರ್ಥನೆ ಮಾಡಿಕೊಂಡಿದ್ದರೆ, ಇನ್ನು ಕೆಲವರು ಬೌದ್ಧಧರ್ಮದಲ್ಲಿ ಇಂತಹ ನಡವಳಿಕೆಗೆ ಜಾಗವಿಲ್ಲ ಎಂದು ಹೇಳಿದ್ದಾರೆ.
ವಿಡಿಯೋದ ಹಿನ್ನೆಲೆ ಏನೆಂದು ಅರಿಯದೇ ಟೀಕಿಸುವುದು ಉತ್ತಮವಲ್ಲ. ನಾಲಿಗೆಯಿಂದ ಶುಭ ಕೋರುವುದು ಟಿಬೆಟ್ ಸಂಪ್ರದಾಯವಾಗಿದೆ ಎಂದು ಸಾಮಾಜಿಕ ಬಳಕೆದಾರರು ಹೇಳಿದ್ದರೆ, ಸಾರ್ವಜನಿಕವಾಗಿ ಆಲಿಂಗನ, ಚುಂಬನ, ಮುಖ ಮತ್ತು ನಾಲಿಗೆಗೆ ಕಿಸ್ ಮಾಡುವುದು ಧರ್ಮದ ವಿರುದ್ಧವಾಗಿದೆ ಎಂದು ಇನ್ನು ಕೆಲವರು ಹೇಳಿದ್ದಾರೆ.
2019 ರಲ್ಲಿ ವಿವಾದ ಸೃಷ್ಟಿಸಿದ್ದ ದಲೈಲಾಮಾ: ದಲೈಲಾಮಾ ಅವರು 2019 ರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ತಮ್ಮ ಉತ್ತರಾಧಿಕಾರಿ ಮಹಿಳೆಯಾಗಬೇಕಾದರೆ, ಅವರು ಆಕರ್ಷಕವಾಗಿರಬೇಕು ಎಂದು ಹೇಳಿದ್ದರು. ಇದು ಭಕ್ತರ ನಂಬಿಕೆಗೆ ಧಕ್ಕೆ ಮತ್ತು ಟೀಕೆಗೆ ಗುರಿಯಾಗಿತ್ತು. ಹೆಣ್ಣು ಮಗಳೊಬ್ಬಳು ನನ್ನ ಉತ್ತರಾಧಿಕಾರಿಯಾದರೆ, ಆಕೆ ತುಂಬಾ ಆಕರ್ಷಕ ಮತ್ತು ಸುಂದರಿಯಾಗಿರಬೇಕು ಎಂದು ವಿದೇಶಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದರು.
ಓದಿ: ಬಾಲಕನಿಗೆ ನಾಲಿಗೆ ಹೀರಲು ಸೂಚಿಸಿದ ದಲೈಲಾಮ: ನೆಟ್ಟಿಗರಿಂದ ಪರ-ವಿರೋಧ ಪ್ರತಿಕ್ರಿಯೆ