ಧೋಲಾಹತ್(ಪಶ್ಚಿಮಬಂಗಾಳ): ದಿನಗೂಲಿ ಮಾಡಿ ಜೀವನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ 1 ಕೋಟಿ ರೂಪಾಯಿ ಲಾಟರಿ ತಗುಲಿದ ಘಟನೆ ಪಶ್ಚಿಮಬಂಗಾಳದಲ್ಲಿ ನಡೆದಿದೆ. ಇದನ್ನು ಕೇಳಿ ಭಯಭೀತಗೊಂಡ ವ್ಯಕ್ತಿ ಆ ಬಂಪರ್ ಲಾಟರಿ ಟಿಕೆಟ್ ಉಳಿಸಿಕೊಳ್ಳಲು ಅಜ್ಞಾತನಾಗಿದ್ದ. ಈತನ ಹುಡುಕಾಟಕ್ಕೆ ಪೊಲೀಸರಿಗೇ ದೂರು ಕೂಡಾ ನೀಡಲಾಗಿತ್ತು.
ಘಟನೆ ಏನು: ಪಶ್ಚಿಮ ಬಂಗಾಳದ 24 ಪರಗಣದ ನಿವಾಸಿಯಾದ ದಿನಗೂಲಿಯೊಬ್ಬ ತಾನು ದುಡಿದ ಹಣದಲ್ಲಿ ದಿನವೂ ಲಾಟರಿ ಟಿಕೆಟ್ ಖರೀದಿಸುತ್ತಿದ್ದ. ಇದನ್ನು ಕಂಡ ಜನರು ಮತ್ತು ಕುಟುಂಬಸ್ಥರು ಆತನನ್ನು 'ಹುಚ್ಚ' ಎಂದು ಜರಿಯುತ್ತಿದ್ದರು. ಆದರೆ, ಆತ ಮಾತ್ರ 'ಲಾಟರಿ ದಿನ'ಕ್ಕಾಗಿ ಕಾದಿದ್ದ.
ಹೀಗಿರುವಾಗ ತಾನು ಖರೀದಿಸಿದ ಲಾಟರಿ ಟಿಕೆಟ್ಗೆ 1 ಕೋಟಿ ರೂಪಾಯಿ ಬಂಪರ್ ಲಾಟರಿ ಸಿಕ್ಕಿದೆ ಎಂದು ತಿಳಿದು ಹೌಹಾರಿದ್ದಾನೆ. ಇದನ್ನು ಪಡೆಯಲು ಆತ ಯಾರಿಗೂ ತಿಳಿಸದೇ ಮನೆಯಿಂದ ನಾಪತ್ತೆಯಾಗಿದ್ದ. ಬಳಿಕ ಕುಟುಂಬಸ್ಥರು ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದರು. ಪೊಲೀಸರು ಇಡೀ ದಿನ ಹುಡುಕಾಡಿ ಕೊನೆಗೆ ಆತನನ್ನು ಬಾಳೆ ತೋಟದಲ್ಲಿ ಪತ್ತೆ ಹಚ್ಚಿದ್ದರು.
ವಿಚಾರಣೆಯ ವೇಳೆ ಆತನನ್ನು ಈ ಬಗ್ಗೆ ಪ್ರಶ್ನಿಸಿದಾಗ ತನಗೆ ಸಿಕ್ಕ ಲಾಟರಿ ಟಿಕೆಟ್ ಅನ್ನು ದುಷ್ಕರ್ಮಿಗಳು ಕದ್ದೊಯ್ಯುವ ಭಯದಲ್ಲಿ ನಾನು ರಾತ್ರಿ ವೇಳೆ ಈ ಬಾಳೆ ತೋಟದಲ್ಲಿ ಬಂದು ಅವಿತುಕೊಳ್ಳುತ್ತಿದ್ದೆ ಎಂದಿದ್ದಾನೆ. ಇದೀಗ ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದದ್ದಲ್ಲದೇ, ಭದ್ರತೆಯನ್ನು ನೀಡಿದ್ದಾರೆ.
ಅಲ್ಲದೇ ತನಗೆ ಬರುವ ಲಾಟರಿ ಹಣದಲ್ಲಿ ಮೊದಲು ತಾನು ಮಾಡಿದ ಸಾಲವನ್ನು ಸಂಪೂರ್ಣವಾಗಿ ತೀರಿಸಿದ ಬಳಿಕ, ಒಂದು ಸುಂದರ ಮನೆ ನಿರ್ಮಾಣ ಮಾಡಿಕೊಳ್ಳಬೇಕು ಎಂಬ ಆಸೆಯನ್ನು ಬಿಚ್ಚಿಟ್ಟಿದ್ದಾರೆ.