ಮುಜಾಫರ್ನಗರ(ಉತ್ತರ ಪ್ರದೇಶ): ಆಧುನಿಕ ಭಾರತದಲ್ಲೂ ದಲಿತರ ಮೇಲೆ ದಬ್ಬಾಳಿಕೆ, ದೌರ್ಜನ್ಯದಂತಹ ಅಮಾನವೀಯ ಘಟನೆ ನಡೆಯುತ್ತಿರುತ್ತವೆ. ಇದೀಗ ಅಂತಹ ಘಟನೆವೊಂದು ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ನಡೆದಿದ್ದು, ಗ್ರಾಮದ ಮುಖ್ಯಸ್ಥ ದಲಿತ ವ್ಯಕ್ತಿಯನ್ನು ಚಪ್ಪಲಿಯಿಂದ ಥಳಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಮುಜಾಫರ್ನಗರ ಜಿಲ್ಲೆಯ ಚಪ್ಪರ್ ಪೊಲೀಸ್ ಠಾಣಾ ವ್ಯಾಪ್ತಿಯ ತಾಜ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಕಳೆದ ಒಂದು ತಿಂಗಳ ಹಿಂದೆ ನಡೆದಿರುವ ಘಟನೆಯ ವಿಡಿಯೋ ಇದಾಗಿದೆ ಎನ್ನಲಾಗ್ತಿದೆ. ಗ್ರಾಮದ ಮುಖ್ಯಸ್ಥ ಅಥವಾ ಗ್ರಾಮ ಪಂಚಾಯ್ತಿ ಮುಖ್ಯಸ್ಥ ಮೋಹನ್ ಎಂಬುವರು ದಲಿತ ವ್ಯಕ್ತಿಯನ್ನು ತಮ್ಮ ಮನೆಗೆ ಕರೆಯಿಸಿ, ಚಪ್ಪಲಿಯಿಂದ ಹೊಡೆದಿದ್ದಾರೆ. ಗ್ರಾಮ ಪಂಚಾಯ್ತಿ ಪ್ರಧಾನ್ನಿಂದ ಥಳಿಸಿಕೊಂಡಿರುವ ವ್ಯಕ್ತಿ ಈ ಬಗ್ಗೆ ಯಾರಿಗೂ ದೂರು ನೀಡಿರಲಿಲ್ಲ. ಆದರೆ, ಒಂದು ತಿಂಗಳ ನಂತರ ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ.
ವೈರಲ್ ಆಗಿರುವ ವಿಡಿಯೋ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಆರೋಪಿ ಮೋಹನ್ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆಯಡಿ ದೂರು ದಾಖಲು ಮಾಡಿ, ಬಂಧಿಸಿದ್ದಾರೆ.
ಇದನ್ನೂ ಓದಿ: ದಲಿತ ವ್ಯಕ್ತಿಗೆ ಥಳಿಸಿದ ಆರೋಪ: ಇಬ್ಬರ ಬಂಧನ
ಈ ಬಗ್ಗೆ ಮಾತನಾಡಿರುವ ಸಂತ್ರಸ್ತ, ಗ್ರಾಮದ ಮುಖಂಡನ ಮಾತು ಕೇಳದ ಕಾರಣಕ್ಕಾಗಿ ತಿಂಗಳ ಹಿಂದೆ ನನ್ನನ್ನು ಮನೆಗೆ ಕರೆಸಿ, ಸಮುದಾಯದವರ ಮುಂದೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆಂದು ದಿನೇಶ್ ಕುಮಾರ್ ಆರೋಪಿಸಿದ್ದಾರೆ. ಇದರ ಬಗ್ಗೆ ಯಾರಿಗಾದರೂ ಹೇಳಿದರೆ, ಮನೆ ಬಿಟ್ಟು ಹೋಗುವಂತೆ ಮಾಡುತ್ತೇನೆಂದು ಬೆದರಿಕೆ ಹಾಕಿದ್ದರು ಎಂದಿದ್ದಾರೆ.
ಪ್ರಕರಣದ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿ, ಪ್ರಕರಣ ಗಂಭೀರತೆಯಿಂದ ಕೂಡಿದ್ದರಿಂದ ಗ್ರಾಮ ಪಂಚಾಯ್ತಿ ಪ್ರಧಾನ್ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಆರೋಪಿಯನ್ನು ಜೈಲಿಗೆ ಅಟ್ಟಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.