ಹೈದರಾಬಾದ್: ಆಂಧ್ರಪ್ರದೇಶ, ಒಡಿಶಾ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಗುಲಾಬ್ ಚಂಡಮಾರುತ ಅಬ್ಬರಿಸಿದೆ. ಇಲ್ಲಿಯವರೆಗೆ ಒಟ್ಟು 25 ಜನರು ಬಲಿಯಾಗಿದ್ದಾರೆಂದು ತಿಳಿದು ಬಂದಿದೆ.
ಗುಲಾಬ್ ಅಬ್ಬರದಿಂದಾಗಿ ದೇಶದ ವಿವಿಧ ರಾಜ್ಯಗಳಲ್ಲಿ ನಿರಂತರವಾಗಿ ಮಳೆ ಸುರಿದು, ಪ್ರವಾಹ ಭೀತಿ ಎದುರಾಗಿದೆ. ಸಾವಿರಾರು ಜನರು ತೊಂದರೆಗೊಳಗಾಗಿದ್ದಾರೆ. ಪ್ರಮುಖವಾಗಿ ಮಹಾರಾಷ್ಟ್ರದ ಅನೇಕ ಪ್ರದೇಶಗಳಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದ್ದು, 17ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರ ಜೊತೆಗೆ 206ಕ್ಕೂ ಅಧಿಕ ಜಾನುವಾರು ಕೊಚ್ಚಿಕೊಂಡು ಹೋಗಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಮಂಡಳಿ ಮಾಹಿತಿ ನೀಡಿದೆ.
ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ಚಂಡಮಾರುತದ ವೇಳೆ ಸಿಡಿಲಿನ ಅಬ್ಬರಕ್ಕೆ 13 ಜನರು ಬಲಿಯಾಗಿದ್ದಾಗಿ ವರದಿಯಾಗಿದೆ. ಉಳಿದಂತೆ ಆಂಧ್ರಪ್ರದೇಶದಲ್ಲಿ ಇಬ್ಬರು ಮೀನುಗಾರರು, ತೆಲಂಗಾಣದಲ್ಲಿ ಓರ್ವ ಪ್ರಾಣ ಕಳೆದುಕೊಂಡಿದ್ದಾನೆ.
ಇದನ್ನೂ ಓದಿ: ಕಾಂಗ್ರೆಸ್ ಮುಳುಗಿಸಲು ರಾಹುಲ್ ಗಾಂಧಿ ಒಬ್ಬರೇ ಸಾಕು: ಶಿವರಾಜ್ ಸಿಂಗ್ ಚೌಹಾಣ್
ಚಂಡಮಾರುತದಿಂದ ಮುಂದಿನ 24 ಗಂಟೆ ಮರಾಠವಾಡ, ಮುಂಬೈ ಹಾಗೂ ಮಹಾರಾಷ್ಟ್ರದ ಕೊಂಕಣ ಪ್ರದೇಶ ಸೇರಿದಂತೆ ಅನೇಕ ಕಡೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಈ ಮಧ್ಯೆ, ಒಡಿಶಾದಲ್ಲಿ ಇಬ್ಬರು ನವಜಾತ ಹೆಣ್ಣು ಮಕ್ಕಳಿಗೆ ಚಂಡಮಾರುತ ಗುಲಾಬ್ ಎಂಬ ಹೆಸರು ಇಡಲಾಗಿದೆ.