ಕೋಝಿಕ್ಕೋಡ್ (ಕೇರಳ): ಸೈಬರ್ ಕಳ್ಳರು ಜನರ ಖಾತೆಗಳಿಂದ ಹಣ ದೋಚುವ ಪ್ರಕರಣಗಳು ಮುಂದುವರೆದಿವೆ. ಈ ಕುರಿತು ಮತ್ತೊಂದು ಘಟನೆ ವರದಿಯಾಗಿದ್ದು, ಕೋಝಿಕ್ಕೋಡ್ ಮೂಲದ ವ್ಯಕ್ತಿ ಸೈಬರ್ ವಂಚನೆಗೆ ಬಲಿಯಾಗಿದ್ದಾರೆ.
ಕೋಝಿಕ್ಕೋಡ್‌ನ ವ್ಯಕ್ತಿ ತನ್ನ ರೈಲು ಟಿಕೆಟನ್ನು ಆನ್‌ಲೈನ್‌ನಲ್ಲಿ ರದ್ದು ಮಾಡಲು ಪ್ರಯತ್ನಿಸುವಾಗ 3.5 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಅವರ ಎಸ್ಬಿ ಮತ್ತು ಎಫ್ಡಿ ಖಾತೆಗಳಿಂದ ಹಣ ದೋಚಲಾಗಿದೆ. 3 ಸೀಕ್ರೆಟ್ ಕೋಡ್ ವೆರಿಫಿಕೇಶನ್ ಮತ್ತು 2 ಒಟಿಪಿ ವೆರಿಫಿಕೇಶನ್ಗಳ ನಂತರ ಖಾತೆಯಿಂದ ಹಣ ಕಳ್ಳತನ ಮಾಡಲಾಗಿದೆ. ಈ ಪ್ರಕರಣ ಪೊಲೀಸ್ ತನಿಖಾಧಿಕಾರಿಗಳ ಅಚ್ಚರಿಗೂ ಕಾರಣವಾಗಿದೆ. ಪೊಲೀಸರ ಪ್ರಕಾರ, ಇಂಥ ವಂಚನೆ ನಡೆದಿರುವುದು ಇದೇ ಮೊದಲು.
ಕೋಝಿಕ್ಕೋಡ್ ಸ್ಥಳೀಯರೊಬ್ಬರು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್ IRCTC ಮೂಲಕ ಟಿಕೆಟ್ ರದ್ದತಿ ಪ್ರಕ್ರಿಯೆ ಪ್ರಾರಂಭಿಸಿದ್ದರು. ಮೊಬೈಲ್‌ನಲ್ಲಿ ಸೈಟ್ ತೆರೆದಾಗ, ಅದೇ ವೆಬ್‌ಸೈಟ್ ಕಾಣಿಸಿದೆ. ಕೇಳಿದ ಒಟಿಪಿ ಸಂಖ್ಯೆ ನೀಡಿದ ನಂತರ, ಟಿಕೆಟ್ ಕೂಡಾ ಕ್ಯಾನ್ಸಲ್ ಆಗಿದೆ. ಮರುಪಾವತಿ ಮೊತ್ತವನ್ನು ಖಾತೆಗೆ ಹಿಂತಿರುಗಿಸಲಾಗಿದೆ ಎಂಬ ಸಂದೇಶವೂ ಬಂದಿದೆ.
ಈ ವೇಳೆ ಖಾತೆಯನ್ನು ಪರಿಶೀಲಿಸಿದಾಗ 50 ಸಾವಿರ ರೂಪಾಯಿ ಡ್ರಾ ಆಗಿದೆ ಎಂದು ಸಂದೇಶ ಬಂದಿತ್ತು. ಕೆಲವೇ ಸೆಕೆಂಡ್‌ಗಳಲ್ಲಿ ಮತ್ತೆ 50,000 ರೂ. ಹಣ ಎಗರಿಸಲಾಗಿದೆ. ತಕ್ಷಣವೇ ಬ್ಯಾಂಕ್ಗೆ ತೆರಳಿ ಖಾತೆ ಪರಿಶೀಲಿಸಿದಾಗ, ಮೂರೂವರೆ ಲಕ್ಷ ಹಣ ಕಳೆದುಕೊಂಡಿರುವುದು ಗೊತ್ತಾಗಿದೆ. ಅವರು ಕೂಡಲೇ ಮ್ಯಾನೇಜರ್ಗೆ ದೂರು ನೀಡಿದ್ದಾರೆ. ಹಣ ಕಳೆದುಕೊಂಡ ವ್ಯಕ್ತಿ ನಿವೃತ್ತ ಸರ್ಕಾರಿ ನೌಕರ. ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ರಜೆಯಲ್ಲಿದ್ದಾರೆ. ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
AI ಡೀಪ್ ಫೇಕ್ ವಿಡಿಯೋ ಕಾಲ್ ಮೂಲಕ ಹಣ ವಂಚನೆ: ಇತ್ತೀಚಿನ ಹಣ ವಂಚನೆ ಪ್ರಕರಣವಿದು. ಈ ಹಿಂದೆ ಕೋಝಿಕ್ಕೋಡ್ ಮೂಲದ ರಾಧಾಕೃಷ್ಣನ್ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಡೀಪ್ ಫೇಕ್ ವಿಡಿಯೋ ಕಾಲ್ ಮೂಲಕ 40,000 ರೂಪಾಯಿ ಕಳೆದುಕೊಂಡಿದ್ದರು. ಪ್ರಕರಣದ ಆರೋಪಿ ಕೌಶಿಕ್ ಶಾ ಅವರ ಅಹಮದಾಬಾದ್‌ನಲ್ಲಿರುವ ಮನೆ ಮತ್ತು ಕಚೇರಿಗಳಲ್ಲಿ ಕೇರಳ ಪೊಲೀಸರು ಶೋಧ ನಡೆಸಿದ್ದರು. ಕೌಶಿಕ್ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿರುವುದು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದರು. ಆದರೆ, ಈ ಆರೋಪಿ ಐದು ವರ್ಷಗಳ ಹಿಂದೆ ಮನೆ ತೊರೆದಿರುವುದು ತನಿಖೆಯಿಂದ ತಿಳಿದುಬಂದಿದೆ. ಎಐ ಡೀಪ್ ಫೇಕ್ ವಿಡಿಯೋ ಕಾಲ್ ಪ್ರಕರಣದ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿರುವಾಗಲೇ, ಅದೇ ಕೋಝಿಕ್ಕೋಡ್ ನಗರದಲ್ಲಿ ಮತ್ತೊಂದು ಸೈಬರ್ ವಂಚನೆ ವರದಿಯಾಗಿದೆ.
ಇದನ್ನೂ ಓದಿ: ಹಾವೇರಿ: ಜಾನಪದ ವಿವಿ ಕುಲಪತಿಯ ₹60 ಸಾವಿರ ದೋಚಿದ ಸೈಬರ್ ಖದೀಮರು