ಲೂಧಿಯಾನ(ಪಂಜಾಬ್): ಬೆಂಗಳೂರಿನ ವೈದ್ಯರೊಬ್ಬರು ಸೈಬರ್ ವಂಚಕರಿಂದ ಮೋಸಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೊರೊನಾ ಸೋಂಕಿನ ನಂತರ ಕಾಡುವ ಕಪ್ಪು ಶಿಲೀಂಧ್ರ ರೋಗಕ್ಕೆ ಔಷಧವನ್ನು ಆನ್ಲೈನ್ನಲ್ಲಿ ಕೊಳ್ಳಲು ಮುಂದಾದ ವೈದ್ಯ ಮಹೇಶ್ ಸುಮಾರು 3.65 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಆರು ತಿಂಗಳ ಹಿಂದೆ ವೈದ್ಯ ಮಹೇಶ್ ತನ್ನ ತಂದೆಗೆ ಕಪ್ಪು ಶಿಲೀಂಧ್ರ ಕಾಣಿಸಿಕೊಂಡ ಕಾರಣದಿಂದ ಔಷಧವನ್ನು ಆನ್ಲೈನ್ನಲ್ಲಿ ಖರೀದಿಸಲು ಮುಂದಾಗಿದ್ದರು. ಈ ವೇಳೆ ಫೇಸ್ಬುಕ್ನಲ್ಲಿ ಪಂಜಾಬ್ ಮೂಲದ ರೋಹನ್ ಚೌಹಾಣ್ ಎಂಬ ವ್ಯಕ್ತಿಯನ್ನು ಸಂಪರ್ಕಿಸಿ, ಔಷಧ ಖರೀದಿಯ ಬಗ್ಗೆ ಮಾತುಕತೆ ನಡೆಸಿದ್ದರು.
ಸುಮಾರು 50 ಕಪ್ಪು ಶಿಲೀಂಧ್ರ ಚುಚ್ಚುಮದ್ದಿಗೆ 3.65 ಲಕ್ಷ ರೂಪಾಯಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಮೊದಲಿಗೆ 10 ಸಾವಿರ ರೂಪಾಯಿ ಮುಂಗಡವನ್ನು ವೈದ್ಯ ಮಹೇಶ್ ಪಾವತಿ ಮಾಡಿದ್ದಾರೆ. ಇದಾದ ಕೆಲವು ದಿನಗಳ ನಂತರ ರೋಹನ್ ಪಾರ್ಸೆಲ್ ಫೋಟೋ ತೆಗೆದು ಡಿಲಿವರಿ ಬಗ್ಗೆ ತಿಳಿಸಿದಾಗ ಉಳಿದ ಹಣವನ್ನು ಆನ್ಲೈನ್ನಲ್ಲಿ ಮಹೇಶ್ ಪಾವತಿಸಿದ್ದಾರೆ.
ಮಹೇಶ್ ಅವರಿಗೂ ಪಾರ್ಸೆಲ್ ಬಂದಿದ್ದು, ಪಾರ್ಸೆಲ್ನಲ್ಲಿ ಚಪ್ಪಲಿ ಪತ್ತೆಯಾಗಿದೆ. ಆರೋಪಿಗಳು ವಂಚಿಸಿ, ಕರೆ ಸ್ವೀಕರಿಸುವುದನ್ನು ನಿಲ್ಲಿಸಿದ್ದಾರೆ. ಇದಾದ ಏಳು ತಿಂಗಳ ನಂತರ ಪ್ರಕರಣ ದಾಖಲಿಸಲಾಗಿದೆ. ಸೂಕ್ತ ಚಿಕಿತ್ಸೆ ದೊರಕದೇ ವೈದ್ಯ ಮಹೇಶ್ ಅವರ ತಂದೆಯೂ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಲೂಧಿಯಾನ ಸೈಬರ್ ಸೆಲ್ ಇನ್ಸ್ಪೆಕ್ಟರ್ ಜತೀಂದರ್ ಸಿಂಗ್ ಈ ಕುರಿತು ಮಾಹಿತಿ ನೀಡಿದ್ದು, ವಂಚನೆ ನಡೆದ 48 ಗಂಟೆಗಳೊಳಗೆ 155 ಅಥವಾ 260ಗೆ ಕರೆ ಮಾಡಿದರೆ, ವಂಚನೆಯ ವಹಿವಾಟನ್ನು ಸ್ಥಗಿತಗೊಳಿಸಬಹುದು ಎಂದು ಜತೀಂದರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪೊಲೀಸರ ಮಿಂಚಿನ ಕಾರ್ಯಾಚರಣೆ.. ₹21 ಕೋಟಿ ಮೌಲ್ಯದ ಹೆರಾಯಿನ್ ಜಪ್ತಿ, ಆರು ಮಂದಿ ಅಂದರ್