ನವದೆಹಲಿ: ಛತ್ತೀಸ್‌ಗಢದಲ್ಲಿ ನಡೆದ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಯಾವುದೇ ಗುಪ್ತಚರ ಅಥವಾ ಕಾರ್ಯಾಚರಣೆಯ ವೈಫಲ್ಯವಾಗಿಲ್ಲ. ನಮ್ಮ ಪಡೆಗಳು 25ರಿಂದ 30 ನಕ್ಸಲರನ್ನು ಹತ್ಯೆಗೈದಿವೆ ಎಂದು ಸಿಆರ್‌ಪಿಎಫ್ ಮುಖ್ಯಸ್ಥ ಕುಲದೀಪ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್)ಯ ಮಹಾನಿರ್ದೇಶಕ ಮತ್ತು ಛತ್ತೀಸಗಡದಲ್ಲಿ ನಕ್ಸಲ್ ದಾಳಿಯ ಪರಿಸ್ಥಿತಿಯನ್ನು ಮೇಲ್ವಿಚಾರಣೆ ನಡೆಸುತ್ತಿರುವ ಕುಲ್‌ದೀಪ್ ಸಿಂಗ್, ಭದ್ರತಾ ಪಡೆಯ ಕಾರ್ಯಾಚರಣೆಯಲ್ಲಿ ಎಷ್ಟು ನಕ್ಸಲರು ಹತರಾಗಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ನಿಖರ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಛತ್ತೀಸ್‌ಗಡದಲ್ಲಿ ನಕ್ಸಲರ ಅಟ್ಟಹಾಸ: ಗುಂಡಿನ ಕಾಳಗದಲ್ಲಿ 22 ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮ
ಗುಪ್ತಚರ ಅಥವಾ ಕಾರ್ಯಾಚರಣೆಯಲ್ಲಿ ವೈಫಲ್ಯವಾಗಿದೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಇದು ಕೇವಲ ಗುಪ್ತಚರ ವೈಫಲ್ಯವಾಗಿದ್ದರೆ, ಕಾರ್ಯಾಚರಣೆ ಗೊಳ್ಳುತ್ತಿರಲಿಲ್ಲ ಮತ್ತು ಕಾರ್ಯಾಚರಣೆಯ ವೈಫಲ್ಯವಾಗಿದ್ದರೆ ಅನೇಕ ನಕ್ಸಲರನ್ನು ಸದೆ ಬಡೆಯುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಟ್ರ್ಯಾಕ್ಟರ್ ಮೂಲಕ ಶವ ಸಾಗಿಸಿದ ನಕ್ಸಲರು:
ಕಾರ್ಯಾಚರಣೆಯಲ್ಲಿ ಗಾಯಗೊಂಡ ಮತ್ತು ಹತರಾದವರ ಮೃತದೇಹವನ್ನು ನಕ್ಸಲರು ಮೂರು ಟ್ರ್ಯಾಕ್ಟರ್‌ಗಳ ಮೂಲಕ ಸ್ಥಳದಿಂದ ಸಾಗಿಸಿದ್ದರು. ಕಾರ್ಯಾಚರಣೆಯಲ್ಲಿ ಎಷ್ಟು ನಕ್ಸಲರು ಹತರಾಗಿದ್ದಾರೆಂದು ನಿಖರವಾಗಿ ಹೇಳುವುದು ಕಷ್ಟ. ಅದು 25-30ಕ್ಕಿಂತ ಕಡಿಮೆಯಾಗಿರಲಾರದು. ಕಾರ್ಯಾಚರಣೆಯಲ್ಲಿ ಹತರಾದ ನಕ್ಸಲರ ಸಂಖ್ಯೆಯನ್ನು ನಿಖರವಾಗಿ ಹೇಳುವುದು ಕಷ್ಟ. ನಮ್ಮ ಅಂದಾಜಿನ ಪ್ರಕಾರ 25 ರಿಂದ 30 ನಕ್ಸಲರು ಸಾವನ್ನಪ್ಪಿರಬಹುದು ಎಂದು ಹೇಳಿದ್ದಾರೆ.
ನಕ್ಸಲ್ ಕಾರ್ಯಾಚರಣೆಯ ಸಂದರ್ಭದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಸೈನಿಕರನ್ನು ಸೋಮವಾರ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಛತ್ತೀಸ್ಗಡ ನಕ್ಸಲ್ ದಾಳಿ ಪ್ರದೇಶಕ್ಕೆ ಇಂದು ಅಮಿತ್ ಶಾ ಭೇಟಿ
ಶನಿವಾರದಿಂದ ಪ್ರಾರಂಭವಾದ ಭದ್ರತಾ ಪಡೆ ಮತ್ತು ನಕ್ಸಲರ ನಡುವಿನ ಗುಂಡಿನ ಚಕಮಕಿಯಲ್ಲಿ 22 ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.