ಮುಜಾಫರ್‌ನಗರ (ಉತ್ತರ ಪ್ರದೇಶ): ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಅವರ ಸಂಬಂಧಿಕರನ್ನು 2020 ರಲ್ಲಿ ಪಂಜಾಬ್ನಲ್ಲಿ ಹತ್ಯೆಗೈದ ಕುಖ್ಯಾತ ರೌಡಿಶೀಟರ್ನನ್ನು ಉತ್ತರ ಪ್ರದೇಶದಲ್ಲಿ ಎನ್ಕೌಂಟರ್ (ಗುಂಡು ಹಾರಿಸಿ ಹತ್ಯೆ) ಮಾಡಲಾಗಿದೆ. ರಾಜಸ್ಥಾನದ ಮೂಲದ ಈ ಗ್ಯಾಂಗ್ಸ್ಟರ್ನನ್ನು ಮುಜಾಫರ್‌ನಗರ ಜಿಲ್ಲೆಯ ಶಾಹಪುರ್ ಪ್ರದೇಶದಲ್ಲಿ ಪೊಲೀಸರು ಹೊಡೆದುರುಳಿಸಿದ್ದಾರೆ.
ರೌಡಿ ರಶೀದ್ ಆಲಿಯಾಸ್ ಸಿಪಾಹಿಯಾ ಹತ್ಯೆಯಾದವನು. ಕೊಲೆ, ಡಕಾಯಿತಿ ಸೇರಿದಂತೆ 12 ಹತ್ಯೆ ಪ್ರಕರಣಗಳಲ್ಲಿ ಬೇಕಾಗಿದ್ದ ಈತನ ತಲೆಗೆ ಪೊಲೀಸರು 50 ಸಾವಿರ ರೂಪಾಯಿ ಘೋಷಿಸಿದ್ದರು. ಉತ್ತರ ಪ್ರದೇಶದಲ್ಲಿ ಸಿಕ್ಕಿಬಿದ್ದ ದುಷ್ಕರ್ಮಿಯನ್ನು ಎನ್ಕೌಂಟರ್ ಮಾಡಲಾಗಿದೆ ಎಂದು ಮುಜಾಫರ್‌ನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಸುಮನ್ ಖಚಿತಪಡಿಸಿದ್ದಾರೆ.
ಉಪ ಪೊಲೀಸ್ ವರಿಷ್ಠಾಧಿಕಾರಿ ವಿನಯ್ ಕುಮಾರ್ ಗೌತಮ್ ಅವರು ನೀಡಿದ ಮಾಹಿತಿಯಂತೆ, ರೌಡಿ ರಶೀದ್ ಮೊರಾದಾಬಾದ್‌ನಲ್ಲಿ ತಲೆಮರೆಸಿಕೊಂಡಿದ್ದ. ಯಾವುದೋ ಅಪರಾಧ ಕೃತ್ಯವನ್ನು ಮಾಡಲು ಮುಜಾಫರ್‌ನಗರಕ್ಕೆ ಬಂದಿದ್ದ. ಮಾಹಿತಿ ಅರಿತ ಪೊಲೀಸರು ಆತನ ಮೇಲೆ ದಾಳಿ ಮಾಡಿದರು. ಈ ವೇಳೆ ರೌಡಿ ಪೊಲೀಸ್ ಸಿಬ್ಬಂದಿಯ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾನೆ. ಪ್ರತಿದಾಳಿ ನಡೆಸಿದ ಪೊಲೀಸರು ಆತನನ್ನು ಹೊಡೆದುರುಳಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಬಬ್ಲು ಕುಮಾರ್‌ಗೂ ಗುಂಡು ತಗುಲಿದೆ. ರೌಡಿಶೀಟರ್ ರಶೀದ್‌ನ ಸಹಚರ ಪರಾರಿಯಾಗಿದ್ದಾನೆ ಎಂದು ತಿಳಿಸಿದರು.
ಅಪರಾಧ ಚಟುವಟಿಕೆಗಳ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ರಾಜಸ್ಥಾನ, ಉತ್ತರ ಪ್ರದೇಶ ಸೇರಿದಂತೆ ವಿವಿಧೆಡೆ ತನಿಖೆ ನಡೆಸಲಾಗುವುದು ಎಂದು ಮುಜಾಫರ್‌ನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಸುಮನ್ ಮಾಹಿತಿ ಒದಗಿಸಿದರು.
ರೈನಾ ಸಂಬಂಧಿಕರ ಹತ್ಯೆ: 2020ರ ಆಗಸ್ಟ್ನಲ್ಲಿ ಕ್ರಿಕೆಟಿಗ ಸುರೇಶ್ ರೈನಾ ಅವರ ಚಿಕ್ಕಪ್ಪ ಅಶೋಕ್ ಕುಮಾರ್, ಅವರ ಮಗ ಕೌಶಲ್ ಕುಮಾರ್, ಪತ್ನಿ ಆಶಾ ರಾಣಿ ಮತ್ತು ಕುಟುಂಬದ ಇಬ್ಬರು ಸದಸ್ಯರ ಮೇಲೆ ಉತ್ತರ ಪ್ರದೇಶದ ಕುಖ್ಯಾತ ಬವಾರಿಯಾ ಗ್ಯಾಂಗ್ ಪಂಜಾಬ್‌ನ ಪಠಾಣ್‌ಕೋಟ್ ಜಿಲ್ಲೆಯ ಥರಿಯಾಲ್‌ನಲ್ಲಿ ದಾಳಿ ನಡೆದಿತ್ತು. ಅಶೋಕ್ ಕುಮಾರ್ ಅವರು ಸ್ಥಳದಲ್ಲಿಯೇ ಮೃತಪಟ್ಟರೆ, ಅವರ ಪತ್ನಿ ಮತ್ತು ಮಗ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಅಸುನೀಗಿದ್ದರು. ರೌಡಿಶೀಟರ್ಗಳ ತಂಡವು ಮನೆಗೆ ನುಗ್ಗಿ ಕುಟುಂಬವನ್ನು ದೊಣ್ಣೆಯಿಂದ ಹೊಡೆದು ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ದೋಚಿತ್ತು.
ಘಟನೆಯ ಬಳಿಕ ಗ್ಯಾಂಗ್ ವಿರುದ್ಧ ಕೊಲೆ, ದರೋಡೆ ಕೇಸ್ ದಾಖಲಿಸಲಾಗಿತ್ತು. ಸಂಬಂಧಿಕರ ಮೇಲೆ ದಾಳಿ ನಡೆದಾಗ ಸುರೇಶ್ ರೈನಾ 2020 ರ ಐಪಿಎಲ್ ಸೀಸನ್ನಲ್ಲಿ ಆಡುತ್ತಿದ್ದರು. ವಿಷಯ ತಿಳಿದ ರೈನಾ ಟೂರ್ನಿಯ ಮಧ್ಯದಲ್ಲೇ ಹೊರಬಂದಿದ್ದರು. ಅಪರಾಧಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಆಗಿನ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರಿಗೆ ಮನವಿ ಮಾಡಿದ್ದರು. 2021 ರ ಜುಲೈನಲ್ಲಿ ಪೊಲೀಸರು ಗ್ಯಾಂಗ್‌ನ ಮಾಸ್ಟರ್‌ಮೈಂಡ್ ಉತ್ತರ ಪ್ರದೇಶದ ಬರೇಲಿಯಲ್ಲಿ ಚಜ್ಜು ಎಂಬಾತನನ್ನು ಬಂಧಿಸಿದ್ದರು.
ಕ್ರಿಕೆಟಿಗನ ಸಂಬಂಧಿಕರ ಹತ್ಯೆಗೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರಿಗೆ ಬೇಕಾಗಿದ್ದ ಇನ್ನಿಬ್ಬರನ್ನು ಕಳೆದ ವರ್ಷ ಮುಜಾಫರ್‌ನಗರದಲ್ಲಿ ಗುಂಡಿನ ದಾಳಿ ನಡೆಸಿ ಬಂಧಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 12 ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ