ಗಯಾ (ಬಿಹಾರ): ಕಟುವಾಗಿ ನಡೆದುಕೊಂಡರೆ ತಾಲಿಬಾನ್ ರೀತಿ ವರ್ತಿಸಬೇಡ ಅಂತ ಹೇಳೋದನ್ನು ಕೇಳಿದೀವಿ. ಬಿಹಾರದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಈ ಮಾತಿಗೆ ಸೂಕ್ತ ನಿದರ್ಶನವೆನ್ನಬಹುದು. ಮನೆಯೊಂದರಲ್ಲಿ ಕಳ್ಳತನ ಮಾಡುವಾಗ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ವ್ಯಕ್ತಿಯನ್ನು ಹಿಡಿದ ಜನರು ಹಿಗ್ಗಾಮುಗ್ಗಾ ಥಳಿಸಿ ಕೂದಲು, ಮೀಸೆ ಬೋಳಿಸಿ ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಗಯಾದ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ವಿಡಿಯೋ ವೈರಲ್ ಆಗಿದೆ.
ಘಟನೆಯ ಸಂಪೂರ್ಣ ವಿವರ: ಪೊಲೀಸರು ನೀಡಿದ ಮಾಹಿತಿಯಂತೆ, ಗಯಾದ ಕೊತ್ವಾಲಿ ಪ್ರದೇಶದ ಮನೆಯೊಂದರಲ್ಲಿ ವ್ಯಕ್ತಿಯೊಬ್ಬ ಕಳ್ಳತನ ಮಾಡುವಾಗ ಜನರ ಕೈಗೆ ಸಿಕ್ಕಿಬಿದ್ದ. ಕೋಪಗೊಂಡ ಜನರು ಕದ್ದ ವಸ್ತುಗಳನ್ನು ಹಿಂಪಡೆದು, ಆತನ ಮೇಲೆ ಸಾಮೂಹಿಕವಾಗಿ ದಾಳಿ ಮಾಡಿದರು. ಹಲ್ಲೆಯಿಂದ ಜರ್ಝರಿತನಾದ ಆತ, ನನ್ನನ್ನು ಕ್ಷಮಿಸಿ, ಕ್ಷಮಿಸಿ ಎಂದೆಲ್ಲ ಗೋಗರೆದ.
ಇಷ್ಟಾದರೂ ಜನರು ಬಿಡಲಿಲ್ಲ. ಆತನ ತಲೆ ಕೂದಲು ಕತ್ತರಿಸಲು ಮುಂದಾದರು. ಆಪಾದಿತ ತೀವ್ರ ಪ್ರತಿರೋಧ ಒಡ್ಡಿದಾಗ ಕಂಬಕ್ಕೆ ಕಟ್ಟಿಹಾಕಿದರು. ತಲೆ, ಮೀಸೆ ಬೋಳಿಸಿ ಹಿಂಸಿಸಿದರು. ಇದನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಖಂಡನೆ: ಕಳ್ಳತನ ಮಾಡಿದ ಆರೋಪಕ್ಕೆ ವ್ಯಕ್ತಿಯನ್ನು ಅತ್ಯಂತ ಕೀಳಾಗಿ ನಡೆಸಿಕೊಂಡು ತಾಲಿಬಾನ್ ರೀತಿ ದೌರ್ಜನ್ಯ ಎಸಗಿದ್ದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ತಪ್ಪಿತಸ್ಥನನ್ನು ಪೊಲೀಸರಿಗೆ ಒಪ್ಪಿಸುವ ಬದಲು ಜನರೇ ಕಾನೂನನ್ನು ಕೈಗೆತ್ತಿಕೊಂಡಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ವಿಡಿಯೋ ವೈರಲ್ಲಾದ ಬಳಿಕ ಕಾನೂನು ಕ್ರಮಕ್ಕೆ ಮುಂದಾಗಿರುವ ಪೊಲೀಸರು, ಯುವಕನ ಮೇಲೆ ಕಳ್ಳತನದ ಆರೋಪವಿದೆ. ಈ ಬಗ್ಗೆ ಮಾಹಿತಿ ನೀಡದೆ ಕೆಲವು ವ್ಯಕ್ತಿಗಳು ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿರುವ ಆರೋಪಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಲಾಗುವುದು. ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ನಗರ ಪೊಲೀಸ್ ಅಧಿಕಾರಿಗಳು ಮತ್ತು ಕಾನೂನು ಜಾರಿ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿದೆ. ಈ ತಂಡ ಘಟನೆಯಲ್ಲಿ ಭಾಗಿಯಾದ ಎಲ್ಲರ ಗುರುತುಗಳನ್ನು ಪತ್ತೆ ಹಚ್ಚಲಿದೆ. ಕೃತ್ಯಕ್ಕೆ ಕಾರಣರಾದವರನ್ನು ಕಾನೂನಿನಡಿ ಶಿಕ್ಷೆಗೊಳಪಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
"ಕಳ್ಳತನ ಆರೋಪದ ಮೇಲೆ ಕೆಲವರು ಯುವಕನನ್ನು ಹಿಡಿದು ಹಗ್ಗದಿಂದ ಕಟ್ಟಿ ಹಾಕಿ ತಲೆ ಬೋಳಿಸಿದ ವಿಡಿಯೋ ವೈರಲ್ ಆಗಿದೆ. ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಂಡು ಆರೋಪಿಗಳನ್ನು ಪತ್ತೆ ಮಾಡಲಾಗುವುದು" ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಆಶಿಶ್ ಭಾರ್ತಿ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: Assam crime: ಅಸ್ಸಾಂನಲ್ಲಿ ಬಾಂಬ್ ತಯಾರಿಸಿ ಮಣಿಪುರಕ್ಕೆ ಸಾಗಾಟ; 200 ಡಿಟೋನೇಟರ್ಸ್, ಜಿಲೆಟಿನ್ ಸ್ಟಿಕ್ ವಶಕ್ಕೆ