ಬಂಕಾ (ಬಿಹಾರ್): ಮೊಬೈಲ್ ಬಳಸದಂತೆ ತಂದೆ ಗದರಿದರೆಂದು ಬೇಸರಗೊಂಡ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ತಡರಾತ್ರಿ ಬಿಹಾರದ ಬಂಕಾ ಎಂಬಲ್ಲಿನ ಫುಲ್ಲಿಡುಮಾರ್ ಪೊಲೀಸ್ ಠಾಣೆ ವ್ಯಾಪ್ತಿಯ ನಾಗರ್ಡಿಹ್ ಗ್ರಾಮದಲ್ಲಿ ನಡೆದಿದೆ. ಸೋನು ಕುಮಾರ್ (19) ಮೃತ ಯುವಕ ಎಂದು ಗುರುತಿಸಲಾಗಿದೆ. ಯುವಕನ ಶವ ತೋಟದಲ್ಲಿ ಪತ್ತೆಯಾಗಿತ್ತು. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮರದಿಂದ ಕೆಳಗಿಳಿಸಿ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಕುಟುಂಬಸ್ಥರ ಪ್ರತಿಕ್ರಿಯೆ: ಮೃತ ಸೋನು ಕುಮಾರ್ ದಿನವಿಡೀ ಹೆಚ್ಚಾಗಿ ಮೊಬೈಲ್ನಲ್ಲೇ ತೊಡಗಿರುತ್ತಿದ್ದ. ಇದನ್ನು ಗಮನಿಸಿದ ಆತನ ತಂದೆ ಧ್ರುವ ನಾರಾಯಣ್ ಯಾದವ್ ದಿನವಿಡೀ ಮೊಬೈಲ್‌ನಲ್ಲಿ ತೊಡಗಿರುತ್ತಿಯಾ, ಹೆಚ್ಚಾಗಿ ಮೊಬೈಲ್ ಬಳಕೆ ಮಾಡದಂತೆ ಬುದ್ದಿವಾದ ಹೇಳಿದ್ದಾರೆ. ಇದರಿಂದ ಮನನೊಂದ ಸೋನು ತನ್ನ ಸ್ನೇಹಿತರ ಬಳಿ ವಿಷಯ ಹೇಳಿದ್ದಾನೆ. ಅಲ್ಲದೇ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ತಿಳಿಸಿದ್ದಾನಂತೆ. ಇಷ್ಟು ಚಿಕ್ಕ ವಿಷಯಕ್ಕೆಲ್ಲ ಸಾವಿನ ಹಾದಿ ತುಳಿಯುವುದು ಸರಿ ಅಲ್ಲ ಎಂದು ಆತನ ಸ್ನೇಹಿತರು ತಿಳಿ ಹೇಳಿದ್ದರಂತೆ. ಅವರ ಮಾತಿಗೆ ಕಿವಿಗೊಡದ ಸೋನು ತಂದೆಯ ಮೇಲಿನ ಕೋಪಕ್ಕೆ ತನ್ನ ಜೀವನವನ್ನೇ ಕೊನೆಗೊಳಿಸಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿ ಹೇಳಿಕೆ: ತಂದೆಯ ಮಾತಿನಿಂದ ಕೋಪಗೊಂಡಿದ್ದ ಸೋನು ಶುಕ್ರವಾರ ಸಂಜೆ ತಡರಾತ್ರಿ ಮನೆಯಿಂದ ಹೊರ ಬಂದಿದ್ದು, ಬಳಿಕ ಹಿಂತಿರುಗಿರಲಿಲ್ಲ. ಸಂಬಂಧಿಕರು ಆತನಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ನಾಗರ್ಡಿಹ್ ಗ್ರಾಮದ ಉತ್ತರ ಬಹಿಯಾರ್ನಲ್ಲಿ ಹುಡುಗನ ಮೃತದೇಹ ಪತ್ತೆಯಾಗಿತ್ತು. ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದರು. ಮಾಹಿತಿಯ ನಂತರ ಸಹಾಯಕ ಪೊಲೀಸ್ ಠಾಣೆಯ ಅಧ್ಯಕ್ಷ ರಾಜೀವ್ ರಂಜನ್, ಬಲ್ವೀರ್ ವಿಂಟಿಕ್, ಎಎಸ್ಐ ಮಹೇಂದ್ರ ಸಿಂಗ್ ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ನಂತರ ಪ್ರಕರಣ ದಾಖಲು: ಮೃತದೇಹವನ್ನು ಬೆಳಗ್ಗೆ ಬಂಕಾದ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತಂದೆ ನಿಂದಿಸಿದ್ದರಿಂದ ಮಗ ಈ ರೀತಿ ನಡೆದುಕೊಂಡಿದ್ದಾನೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ತನಿಖೆ ನಡೆಸಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.
ಇದನ್ನೂ ಓದಿ: ಪ್ರೀತಿ ನಿರಾಕರಿಸಿದ ಯುವತಿಯ ಕತ್ತು ಸೀಳಿ, ತಾನೂ ಆತ್ಮಹತ್ಯೆಗೆ ಶರಣಾದ ಪಾಗಲ್ಪ್ರೇಮಿ!