ಜಲ್ನಾ(ಮಹಾರಾಷ್ಟ್ರ) : ಒಮ್ಮೊಮ್ಮೆ ಕೋಪದ ಭರದಲ್ಲಿ ನಡೆಯಬಾರದ ಅನಾಹುತಗಳು ಘಟಿಸುತ್ತವೆ. ಸತ್ಯ ತಿಳಿದ ಬಳಿಕ ಮರುಗುವ ವೇಳೆಗೆ ಎದುರಿನವರ ಪ್ರಾಣವೇ ಹಾರಿ ಹೋಗಿರುತ್ತದೆ. ಅಂಥದ್ದೇ ಒಂದು ದುರಂತ ಮಹಾರಾಷ್ಟ್ರದಲ್ಲಿ ನಡೆದಿದೆ. ಹೋಟೆಲ್ ಮುಂದೆ ನಿಲ್ಲಿಸಲಾಗಿದ್ದ ಬೈಕ್ ಅನ್ನು ತಪ್ಪಾಗಿ ತೆಗೆದುಕೊಂಡು ಹೋಗಿ, ಮರಳಿಸಲು ವಾಪಸ್ ಬರುವಾಗ ನಾಲ್ವರು ಕೋಪೋದ್ರಿಕ್ತರ ಕೈಗೆ ಸಿಕ್ಕು ವ್ಯಕ್ತಿಯೊಬ್ಬ ಹತನಾಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ಘಟನೆಯ ವಿವರ: ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಭಿಲ್ಪುರಿ ಎಂಬಲ್ಲಿ ನಡೆದಿದ್ದು ಆಗಸ್ಟ್ 26 ರಂದು ಸಿದ್ದಾರ್ಥ್ ಮಂಡ್ಲೆ ಮೃತಪಟ್ಟ ದುರ್ದೈವಿ. ಈತ ಸ್ನೇಹಿತರೊಂದಿಗೆ ಬದ್ನಾಪುರ ತಾಲೂಕಿನ ದರೇಗಾಂವ್ ಶಿವರಾ ಎಂಬಲ್ಲಿನ ಢಾಬಾದಲ್ಲಿ ಊಟಕ್ಕೆ ತೆರಳಿದ್ದ. ಅಲ್ಲಿಂದ ತೆರಳುವಾಗ ತಾನು ತಂದಿದ್ದ ಬೈಕ್ನಂತೆಯೇ ಇರುವ ಇನ್ನೊಂದು ಬೈಕ್ ಅನ್ನು ತಪ್ಪಾಗಿ ತೆಗೆದುಕೊಂಡು ಹೋಗಿದ್ದಾನೆ.
ಬಳಿಕ ಮತ್ತೊಬ್ಬರ ಬೈಕ್ ಅನ್ನು ತಂದಿರುವುದು ಅರಿವಾದಾಗ ಮರಳಿಸಲು ಆತ ಹೋಟೆಲ್ ಕಡೆ ಬಂದಿದ್ದಾನೆ. ಅಷ್ಟೊತ್ತಿಗಾಗಲೇ ಬೈಕ್ ಕಳ್ಳತನವಾದ ಬಗ್ಗೆ ಅದರ ನಿಜವಾದ ಮಾಲೀಕರ ಗಮನಕ್ಕೆ ಬಂದಿದೆ. ಇದರಿಂದ ಕುಪಿತಗೊಂಡ ತಂಡ ಬೈಕ್ ಕದ್ದೊಯ್ಯಲಾಗಿದೆ ಎಂದು ತಿಳಿದು 5-6 ಜನರು ಸಿದ್ದಾರ್ಥ್ನನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ.
ಭಿಲ್‌ಪುರಿ ಗ್ರಾಮದ ಬಳಿ ಸಿದ್ಧಾರ್ಥ್‌ನನ್ನು ಬೈಕ್ ಮೇಲೆ ಕಂಡ ಗುಂಪು ಏಕಾಏಕಿ ಆತನ ಮೇಲೆ ದಾಳಿ ಮಾಡಿದೆ. ಬೈಕ್ ಅನ್ನು ಆತ ಮರಳಿಸಲು ಬಂದಿದ್ದಾಗಿ ಹೇಳಿದರೂ, ಕೇಳದ ಉದ್ರಿಕ್ತರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಆತ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಆದರೂ ಬಿಡದ ಅವರು ಬೆನ್ನಟ್ಟಿ ಹೋಗಿದ್ದಾರೆ.
ಮೊಬೈಲ್ ರೆಕಾರ್ಡ್ನಲ್ಲಿ ಅಸಲಿ ಸತ್ಯ: ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದಾಗ ಸಿದ್ದಾರ್ಥ್ ತಮ್ಮ ಸಂಬಂಧಿಕರಿಗೆ ಕರೆ ಮಾಡಿದ್ದಾನೆ. ಬೈಕ್ ತಪ್ಪಾಗಿ ತೆಗೆದುಕೊಂಡು ಹೋಗಿದ್ದೆ. ಮರಳಿಸಲು ಬಂದಾಗ ಕೆಲವರು ತನ್ನ ಮೇಲೆ ದಾಳಿ ಮಾಡಿದ್ದಾರೆ. ಕೊಂದು ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನನ್ನನ್ನು ರಕ್ಷಿಸಿ, ನನಗೆ ಸಹಾಯ ಮಾಡಿ ಎಂದು ಆತ ಗೋಗರೆದಿದ್ದಾರೆ. ಇದು ಮೊಬೈಲ್ನಲ್ಲಿ ರೆಕಾರ್ಡ್ ಆಗಿದೆ. ಕಡೆಗೆ ಕೋಪೋದ್ರಿಕ್ತ ಗುಂಪು ಸಿದ್ದಾರ್ಥ್ ಮೇಲೆ ಭೀಕರವಾಗಿ ಹಲ್ಲೆ ಮಾಡಿದ್ದು, ಆತ ಸ್ಥಳದಲ್ಲೇ ಅಸುನೀಗಿದ್ದಾನೆ.
ನಾಲ್ವರು ಆರೋಪಿಗಳು ಅರೆಸ್ಟ್: ಅಸಲಿ ಸತ್ಯದ ಮೊಬೈಲ್ ರೆಕಾರ್ಡ್ ಹೊರಬಿದ್ದ ಬಳಿಕ ಮೃತ ಸಿದ್ದಾರ್ಥ್ ಅವರ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ವಿಚಾರಣೆ ಆರಂಭಿಸಿದ ಪೊಲೀಸರು, ಗಣೇಶ್ ಕೈಲಾಸ್ ಜಾಧವ್, ಆಕಾಶ್ ಅಶೋಕ್ ಜಾಧವ್, ತುಳಶಿರಾಮ್ ಗಾಯಕವಾಡ, ಕುಂಡ್ಲಿಕ್ ಭಗವಾನ್ ತಿರುಖೆ ಎಂಬುವರನ್ನು ಬಂಧಿಸಿದ್ದಾರೆ. ಇವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ತೆಲಂಗಾಣ ಕಾಂಗ್ರೆಸ್ ನಾಯಕನ ವಿರುದ್ಧ ಅತ್ಯಾಚಾರ ಆರೋಪ: ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್ಐಆರ್ ದಾಖಲು