ಜುಬಿಲಿ ಹಿಲ್ಸ್ (ತೆಲಂಗಾಣ) : ಮಹಿಳೆಯೊಬ್ಬರು 50 ಲಕ್ಷ ರೂಪಾಯಿ ಮೌಲ್ಯದ ವಜ್ರದ ಉಂಗುರವನ್ನು ಕದ್ದು, ನಂತರ ಭಯದಿಂದ ಆಸ್ಪತ್ರೆಯ ಕಮೋಡ್ ಒಳಗೆ ಎಸೆದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.
ಬಂಜಾರಾ ಹಿಲ್ಸ್‌ನ ನರೇಂದ್ರ ಕುಮಾರ್ ಅಗರ್ವಾಲ್ ಎಂಬವರ ಸೊಸೆ ಜೂನ್ 27ರಂದು ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಎಫ್‌ಎಂಎಸ್ ದಂತ ಮತ್ತು ಚರ್ಮದ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ್ದರು. ಚಿಕಿತ್ಸೆ ವೇಳೆ ಮಹಿಳೆಯು ತನ್ನ ಬೆರಳಿನಿಂದ ಉಂಗುರವನ್ನು ತೆಗೆದು ಪಕ್ಕದ ಮೇಜಿನ ಮೇಲೆ ಇಟ್ಟಿದ್ದರು. ಕ್ಲಿನಿಕ್ನಿಂದ ಹೊರಬಂದ ಬಳಿಕ ಅವರು ಅದನ್ನು ತೆಗೆದುಕೊಳ್ಳಲು ಮರೆತಿದ್ದಾರೆ.
ಕೆಲ ಸಮಯದ ಬಳಿಕ ಟೇಬಲ್ ಬಳಿ ಹೋದ ಮಹಿಳೆಯೊಬ್ಬಳು ಉಂಗುರವನ್ನು ನೋಡಿ, ಅದನ್ನು ತನ್ನ ಪರ್ಸ್‌ಗೆ ಹಾಕಿಕೊಂಡಿದ್ದಾಳೆ. ಆದರೆ, ಇದು ತುಂಬಾ ದುಬಾರಿಯಾದ ಉಂಗುರ ಎಂದು ತಿಳಿದ ಆಕೆ ಗೊಂದಲಕ್ಕೀಡಾಗಿದ್ದು, ಪೊಲೀಸರಿಗೆ ಸಿಕ್ಕಿ ಬೀಳಬಹುದೆಂಬ ಭಯದಿಂದ ವಾಶ್‌ರೂಮ್‌ಗೆ ತೆರಳಿ, ಟಿಶ್ಯೂ ಪೇಪರ್‌ನಿಂದ ಉಂಗುರ ಸುತ್ತಿ ಅದನ್ನು ಕಮೋಡ್‌ಗೆ ಎಸೆದಿದ್ದಾಳೆ.
ಈ ಮಧ್ಯೆ, ಮನೆಗೆ ಹಿಂದಿರುಗಿದ ಅಗರ್ವಾಲ್ ಸೊಸೆಗೆ ತನ್ನ ಬೆರಳಿನಲ್ಲಿದ್ದ ಉಂಗುರವನ್ನು ಆಸ್ಪತ್ರೆಯ ಟೇಬಲ್ ಮೇಲೆ ಬಿಟ್ಟು ಬಂದಿರುವುದು ನೆನಪಾಗಿದೆ. ತಕ್ಷಣ ಕ್ಲಿನಿಕ್ಗೆ ತೆರಳಿದ್ದಾರೆ. ಇಡೀ ಆಸ್ಪತ್ರೆಯಲ್ಲಿ ಹುಡುಕಾಡಿದರೂ ಉಂಗುರ ಪತ್ತೆಯಾಗಿಲ್ಲ. ಬಳಿಕ, ಸಿಬ್ಬಂದಿಯನ್ನು ವಿಚಾರಿಸಿದ್ದು ಯಾವುದೇ ಪ್ರಯೋಜನವಾಗಿಲ್ಲ. ನಂತರ ನರೇಂದ್ರ ಕುಮಾರ್ ಜುಬ್ಲಿ ಹಿಲ್ಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು.
ಇದನ್ನೂ ಓದಿ : Haveri Theft Case : ಮೊದಲು ಲಾರಿ ಕದ್ರು.. ಬಳಿಕ 87 ಲಕ್ಷ ರೂ. ಮೌಲ್ಯದ ಗುಟ್ಕಾ ಕದ್ದೊಯ್ದಿದ್ದ ನಾಲ್ವರು ಆರೋಪಿಗಳು ಅಂದರ್
ಪ್ರಕರಣ ದಾಖಲಿಸಿಕೊಂಡ ಡಿಐ ರಾಮಪ್ರಸಾದ್, ಡಿಎಸ್‌ಐ ರಾಜಶೇಖರ್ ತನಿಖೆ ಕೈಗೊಂಡು ಕ್ಲಿನಿಕ್ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದರು. ಬಳಿಕ, ಆಸ್ಪತ್ರೆ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದರು. ಆದರೆ, ತನಿಖಾಧಿಕಾರಿಗಳಿಗೆ ಉಂಗುರದ ಬಗ್ಗೆ ಯಾವುದೇ ಮಾಹಿತಿ ದೊರೆಯಲಿಲ್ಲ.
ಇದನ್ನೂ ಓದಿ : ಕಳ್ಳತನ ಮಾಡಲು ಬಂದು ಸಿಕ್ಕಿ ಬಿದ್ದ ಕಳ್ಳ : ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು
ಹೆಚ್ಚಿನ ವಿಚಾರಣೆ ನಡೆಸಿದಾಗ ಮಹಿಳೆಯೊಬ್ಬರು ಉಂಗುರವನ್ನು ಕಮೋಡ್‌ಗೆ ಎಸೆದಿರುವುದಾಗಿ ತಿಳಿಸಿದ್ದಾರೆ. ಪೊಲೀಸರು ಮೆಕ್ಯಾನಿಕ್‌ಗೆ ಕರೆ ಮಾಡಿ ಕಮೋಡ್ ಮತ್ತು ಪೈಪ್‌ಲೈನ್‌ಗಳನ್ನು ತೆಗೆಯುವಂತೆ ಸೂಚಿಸಿದ್ದು, ಸಿಬ್ಬಂದಿ ಮತ್ತು ಮೆಕ್ಯಾನಿಕ್ ಸಹಾಯದಿಂದ ಪೊಲೀಸರು ಕಮೋಡ್‌ಗೆ ಸಂಪರ್ಕ ಕಲ್ಪಿಸುವ ನೀರಿನ ಪೈಪ್‌ಲೈನ್‌ನಿಂದ ಉಂಗುರವನ್ನು ವಶಪಡಿಸಿಕೊಂಡರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ಸಿಸಿ ಕ್ಯಾಮರಾ ಒಡೆದು ಕಳ್ಳತನಕ್ಕೆ ಯತ್ನಿಸಿದ್ದ ಖದೀಮ : ಜನರ ಕೈಗೆ ಸಿಕ್ಕಿಬಿದ್ದ ಆರೋಪಿ ಪೊಲೀಸರ ವಶಕ್ಕೆ