ಬೇಗುಸರಾಯ್ (ಬಿಹಾರ) : ಕೆಲವೊಂದು ವರದಿಗಳು ಓದ್ತಾ ಇದ್ರೆ ರಕ್ತಕುದಿಯುತ್ತೆ. ಭೂಮಿ ಮೇಲೆ ಇಂತಹ ಜನರು ಇದ್ದಾರಾ ಅಂತ ಪಿತ್ತ ನೆತ್ತಿಗೇರುತ್ತೆ. ಅಂಥದ್ದೇ ಒಂದು ಸುದ್ದಿ ಬಿಹಾರದಿಂದ ಹೊರ ಬಿದ್ದಿದೆ. ನರ್ಸರಿ ಓದುತ್ತಿರುವ ಇಬ್ಬರು ಪುಟ್ಟ ಬಾಲಕಿಯರ ಮೇಲೆ ಕೀಚಕ ಅತ್ಯಾಚಾರ ಮಾಡಿದ್ದಾನೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಕಿರಾತಕನನ್ನು ಬಂಧಿಸಲಾಗಿದೆ.
ಘಟನೆಯ ವಿವರ: ಬಿಹಾರದ ಬೇಗುಸರಾಯ್ನಲ್ಲಿ ಈ ಪ್ರಕರಣ ನಡೆದಿದೆ. ಶಾಲಾ ವಾಹನ ಚಾಲಕ ಅಮಾನುಷವಾಗಿ ಇಬ್ಬರು ಅಮಾಯಕ ಬಾಲಕಿಯರ ಮೇಲೆ ಪೈಶಾಚಿಕ ಕೃತ್ಯ ಎಸಗಿದವನು. ಪುಟ್ಟ ಮಕ್ಕಳನ್ನು ಅಸಭ್ಯವಾಗಿ ನಡೆಸಿಕೊಂಡಿದ್ದಲ್ಲದೇ, ಇದರ ವಿಡಿಯೋವನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಬುಧವಾರ ಶಾಲೆ ಮುಗಿದ ಬಳಿಕ ಮಕ್ಕಳನ್ನು ಮನೆಗೆ ಕರೆದೊಯ್ಯುವಾಗ ಸಂತ್ರಸ್ತ ಬಾಲಕಿಯರನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು, ಇಬ್ಬರ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಆತನೇ ಬಾಲಕಿಯರನ್ನು ಮನೆಯ ಬಳಿ ಬಿಟ್ಟು ವಾಪಸಾಗಿದ್ದಾನೆ. ಮನೆಗೆ ತಲುಪಿದ ಕೂಡಲೇ ಬಾಲಕಿಯರಿಬ್ಬರ ಸ್ಥಿತಿ ಕಂಡು ಅವರ ಕುಟುಂಬದವರು ವಿಚಾರಿಸಿದಾಗ ಇಡೀ ಘಟನೆ ಬೆಳಕಿಗೆ ಬಂದಿದೆ.
ತಕ್ಷಣವೇ ಕುಟುಂಬಸ್ಥರು ಎಚ್ಚೆತ್ತು ಪರಾರಿಯಾಗುತ್ತಿದ್ದ ಸ್ಕೂಲ್ ವ್ಯಾನ್ ಚಾಲಕನನ್ನು ಗ್ರಾಮಸ್ಥರ ಸಹಾಯದಿಂದ ಹಿಡಿದಿದ್ದಾರೆ. ಬಳಿಕ ಪೊಲೀಸರಿಗೆ ವಿಷಯ ತಿಳಿಸಿ, ಆರೋಪಿಯನ್ನು ಒಪ್ಪಿಸಿದ್ದಾರೆ. ಈ ಘಟನೆಯು ಗ್ರಾಮದಲ್ಲಿ ಸಂಚಲನ ಸೃಷ್ಟಿಸಿದೆ. ಇಬ್ಬರೂ ಬಾಲಕಿಯರು ಸ್ನೇಹಿತರಾಗಿದ್ದು, ಸ್ವಲ್ಪ ದೂರದಲ್ಲೇ ಅವರ ನಿವಾಸಗಳಿವೆ. ಬಾಲಕಿಯರಿಬ್ಬರೂ 5 ವರ್ಷದವರಾಗಿದ್ದಾರೆ. ಖಾಸಗಿ ಶಾಲೆಯೊಂದರಲ್ಲಿ ನರ್ಸರಿ ಅಭ್ಯಾಸ ಮಾಡುತ್ತಿದ್ದಾರೆ.
ಬೇಲಿ ಎದ್ದು ಹೊಲ ಮೇಯ್ದಂತೆ: ಮಕ್ಕಳ ಮೇಲೆ ಪೈಶಾಚಿಕ ಕೃತ್ಯ ನಡೆಸಿರುವ ಚಾಲಕ ಶಾಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಮಕ್ಕಳನ್ನು ಡ್ರಾಪ್, ಪಿಕಪ್ ಮಾಡುವ ಕೆಲಸ ಮಾಡುತ್ತಿದ್ದ. ಚಿಕ್ಕ ಮಕ್ಕಳು ಎನ್ನದೇ ಅವರ ಮೇಲೆ ತನ್ನ ದಾರ್ಷ್ಟ್ಯ ಮೆರೆದಿದ್ದಾನೆ. ಸದ್ಯ ಕಿರಾತಕನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಪೊಲೀಸ್ ಅಧಿಕಾರಿ ಅಮಿತ್ ಕುಮಾರ್ ಮಾತನಾಡಿ, ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಮಾಹಿತಿ ಬಂದಿದೆ. ವಿಷಯ ತಿಳಿದು ಪೊಲೀಸ್ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಅತ್ಯಾಚಾರ ಆರೋಪಿ ಚಾಲಕನನ್ನು ಬಂಧಿಸಲಾಗಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸಾಕ್ಷ್ಯ ಸಂಗ್ರಹ ನಡೆಸಿ ತಪ್ಪಿತಸ್ಥನಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್; ಅಸಹ್ಯಕರ ವಿಷಯ ಅಂದ್ರೆ ಮಕ್ಕಳನ್ನು ನರರಾಕ್ಷಸನಂತೆ ನಡೆಸಿಕೊಂಡ ಕೀಚಕ ರೇಪ್ ಮಾಡಿದ್ದನ್ನು ತನ್ನ ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಆರೋಪಿಯ ಮೊಬೈಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೊಬೈಲ್ ತಪಾಸಣೆ ನಡೆಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಚಾಲಕನ ಹಿನ್ನೆಲೆ ಪರಿಶೀಲನೆ ನಡೆಸದೇ ಶಾಲಾ ಆಡಳಿತ ಮಂಡಳಿ ನೇಮಿಸಿಕೊಂಡು ಎಡವಟ್ಟು ಮಾಡಿದೆ. ಯಾವುದೇ ಉದ್ಯೋಗಿಯನ್ನು ನೇಮಿಸಿಕೊಳ್ಳುವ ಮುನ್ನ ಅವರ ಹಿನ್ನೆಲೆ ಪರಿಶೀಲನೆ ಮಾಡಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಬಾಯ್ ಫ್ರೆಂಡ್ ಫೋನ್‌ನಲ್ಲಿ 13 ಸಾವಿರ ನಗ್ನ ಫೋಟೋಗಳು.. ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವತಿ