ಜೈಪುರ (ರಾಜಸ್ಥಾನ): ಕೋಚಿಂಗ್ ತರಗತಿಗೆ ತೆರಳುತ್ತಿದ್ದ 20 ವರ್ಷದ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ದುಷ್ಕರ್ಮಿಗಳು ಆಕೆಯನ್ನು ಹತ್ಯೆ ಮಾಡಿದ್ದಾರೆ. ಈ ಪ್ರಕರಣ ಮಂಗಳವಾರ ರಾಜಸ್ಥಾನದ ಬಿಕಾನೇರ್‌ನಲ್ಲಿ ನಡೆದಿದ್ದು, ಖಜುವಾಲಾ ಪ್ರದೇಶದಲ್ಲಿ ಶವ ಪತ್ತೆಯಾಗಿದೆ ಎಂದು ಪೊಲೀಸ್ ಮಹಾನಿರೀಕ್ಷಕ (ಐಜಿ) ಓಂ ಪ್ರಕಾಶ್ ಬುಧವಾರ ತಿಳಿಸಿದ್ದಾರೆ.
ಯುವತಿಯ ತಂದೆ ಕಾಜುವಾಲಾ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ಗಳಾದ ಮನೋಜ್ ಮತ್ತು ಭಾಗೀರಥ್ ಜೊತೆಗೆ ಮತ್ತೊಬ್ಬ ಯುವಕನ ವಿರುದ್ಧ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಕುಟುಂಬಸ್ಥರು ಇತರ ಯುವಕರು ಭಾಗಿಯಾದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ. ಆರೋಪಿಗಳಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಬುಧವಾರ ಖಾಜುವಾಲಾ ಅತ್ಯಾಚಾರ ಮತ್ತು ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಹಿಳೆಯರ ಸುರಕ್ಷತೆಯ ಜವಾಬ್ದಾರಿ ಯಾರ ಹೆಗಲ ಮೇಲಿದೆಯೋ ಅಂಥವರೇ ದುಷ್ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ ಎಂದು ಟ್ವಿಟರ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರತಿದಿನ ಬೆಳಗ್ಗೆ ಯುವತಿ ತನ್ನ ಕೋಚಿಂಗ್ ತರಗತಿಗಳಿಗೆ ಹೋಗುತ್ತಿದ್ದಳಂತೆ. ಮಂಗಳವಾರವೂ ಎಂದಿನಂತೆ ಮನೆಯಿಂದ ತೆರಳಿದ್ದ ಆಕೆ ವಾಪಸ್ ಬಂದಿರಲಿಲ್ಲ. ಇದುವರೆಗೂ ಪ್ರಕರಣದಲ್ಲಿ ಯಾರನ್ನೂ ಬಂಧಿಸದ ಪೊಲೀಸರ ಕ್ರಮಕ್ಕೆ ಕುಟುಂಬಸ್ಥರು ಆಕ್ರೋಶಗೊಂಡಿದ್ದಾರೆ. ಸಂತ್ರಸ್ತ ಕುಟುಂಬದೊಂದಿಗೆ ಬಿಜೆಪಿ ಮುಖಂಡರು ಕೂಡ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಯುವತಿಯ ತಂದೆ ಮಾತನಾಡಿ, "ಮಗಳು ಕೋಚಿಂಗ್‌ಗಾಗಿ ಕಂಪ್ಯೂಟರ್ ಸೆಂಟರ್‌ಗೆ ಹೋಗಿದ್ದಳು. ನಂತರ ಗಾಯಗೊಂಡ ಸ್ಥಿತಿಯಲ್ಲಿ ನಿಮ್ಮ ಮಗಳು ಖಜುವಾಲಾ ಆಸ್ಪತ್ರೆಯಲ್ಲಿದ್ದಾಳೆ ಎಂದು ಪೊಲೀಸ್ ಸಿಬ್ಬಂದಿ ನಮಗೆ ಕರೆ ಮಾಡಿ ತಿಳಿಸಿದರು. ಅಲ್ಲಿಗೆ ತಲುಪುತ್ತಿದ್ದಂತೆ ಆಕೆಯ ಸಾವಿನ ಬಗ್ಗೆ ನಮಗೆ ತಿಳಿಸಿದರು. ಇಬ್ಬರು ಪೊಲೀಸ್ ಕಾನ್ಸ್‌ಟೇಬಲ್‌ಗಳ ಜೊತೆಗೆ ಮತ್ತೊಬ್ಬ ಯುವಕ ದಿನೇಶ್ ಎಂಬಾತ ಪ್ರತಿದಿನ ನಮ್ಮ ಮಗಳನ್ನು ಹಿಂಬಾಲಿಸುತ್ತಿದ್ದರು" ಎಂದು ಹೇಳಿದ್ದಾರೆ.
ದುಷ್ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಪೊಲೀಸರನ್ನು ಕೆಲಸದಿಂದ ವಜಾ ಮಾಡುವ ಬದಲು ಅಮಾನತು ಮಾಡಿರುವುದಕ್ಕೆ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಸಿಬ್ಬಂದಿ ವಿರುದ್ಧದ ಆರೋಪ ಸಾಬೀತಾದರೆ ಅವರನ್ನು ವಜಾಗೊಳಿಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಪ್ರಕರಣದ ಆರೋಪಿಗಳಾದ ದಿನೇಶ್ ಬಿಷ್ಣೋಯ್, ಮನೋಜ್ ಮತ್ತು ಭಾಗೀರಥ್ ಎಂಬವರ ವಿರುದ್ಧ ಪೊಲೀಸರು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಹಾಗೂ ಎಸ್‌ಸಿ-ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರತಾಪ್ ಸಿಂಗ್ ಖಚರಿಯಾವಾಸ್ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: Rape on minor girl: ಸ್ಕೂಟಿ ಕಲಿಸುವುದಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರ : ಕಾಮುಕನ ಬಂಧನ