ನಳಂದಾ : ಬಿಹಾರದ ನಳಂದಾ ಜಿಲ್ಲೆಯಲ್ಲಿ ಚರಂಡಿ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ ಒಂಬತ್ತು ವರ್ಷದ ವಿದ್ಯಾರ್ಥಿಯೊಬ್ಬನನ್ನು ಆರೋಪಿ ಶಿಕ್ಷಕನೊಬ್ಬ 12 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯು ಸಿಲಾವ್ ಪೊಲೀಸ್ ಠಾಣೆ ವ್ಯಾಪ್ತಿಯ ಕದಹ್ ಬಜಾರ್‌ನ ಹೈದರ್‌ಗಂಜ್ ಪ್ರದೇಶದಲ್ಲಿ ನಡೆದಿದೆ. ಮೃತರ ಹೆಸರು ಮೊಹಮ್ಮದ್ ಶಫೀಕ್ ಎಂಬುದಾಗಿ ತಿಳಿದು ಬಂದಿದೆ. ಬುಧವಾರ ಬೆಳಗ್ಗೆ ಆಟವಾಡಲು ಮನೆಯಿಂದ ಹೊರಗೆ ಬಂದಿದ್ದ ವೇಳೆ ನೆರೆಮನೆಯ ಶಿಕ್ಷಕ ಬಾಲಕನನ್ನು ಮಾಂಸ ಕತ್ತರಿಸುವ ಚಾಕುವಿನಿಂದ ಹನ್ನೆರೆಡು ಬಾರಿ ಬರ್ಬರವಾಗಿ ಇರಿದಿದ್ದಾರೆ ಎಂಬುದು ತಿಳಿದುಬಂದಿದೆ.
ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು: ಆರೋಪಿ ಶಿಕ್ಷಕನು ಮೃತ ಬಾಲಕನ ಕುಟುಂಬದೊಂದಿಗೆ ತ್ಯಾಜ್ಯ ನೀರು ವಿಲೇವಾರಿ ಮಾಡುವ ಬಗ್ಗೆ ಜಗಳವಾಡಿದ್ದರು. ಹೀಗಾಗಿ ಆರೋಪಿ ಮೊಹಮ್ಮದ್ ಫಿರೋಜ್ ತನ್ನ ನೆರೆಹೊರೆಯವರ ಮೇಲೆ ಸೇಡು ತೀರಿಸಿಕೊಳ್ಳಲು 4 ನೇ ತರಗತಿ ವಿದ್ಯಾರ್ಥಿಯನ್ನು ಹತ್ಯೆ ಮಾಡಿದ್ದಾನೆ. ಕ್ರೂರ ಹತ್ಯೆಯ ನಂತರ, ಫಿರೋಜ್ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಆದರೆ, ಸ್ಥಳೀಯರು ಅವನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಪೊಲೀಸರಿಗೆ ಅಪರಾಧದ ಬಗ್ಗೆ ಮಾಹಿತಿ ನೀಡಲಾಗಿದ್ದು, ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
'ಹತ್ಯೆಯ ಮಾಹಿತಿ ಪಡೆದ ಪೊಲೀಸರು ಮೃತದೇಹವನ್ನು ವಶಕ್ಕೆ ತೆಗೆದುಕೊಂಡು ನಂತರ ಬಿಹಾರ ಷರೀಫ್ ಸದರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ' ಎಂದು ಸಿಲಾವ್ ಪೊಲೀಸ್ ಠಾಣೆಯ ಚೌಕಿದಾರ್ ಮಹೇಶ್ ಪಾಸ್ವಾನ್ ತಿಳಿಸಿದ್ದಾರೆ.
ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಮೃತಪಟ್ಟ ಬಾಲಕ: ''ಬಾಲಕ ಎಂ. ಡಿ. ಸಿರಾಜ್ ಬೆಳಗ್ಗೆ ಆಟವಾಡಲು ಮನೆಯಿಂದ ಹೊರಗೆ ಹೋಗಿದ್ದ. ಆಗ ನೆರೆಮನೆಯಲ್ಲಿ ವಾಸವಿದ್ದ ಶಿಕ್ಷಕ ಸೇಡು ತೀರಿಸಿಕೊಳ್ಳಲು ಬಾಲಕನಿಗೆ ಚಾಕುವಿನಿಂದ ಹಲವು ಬಾರಿ ಇರಿದಿದ್ದಾರೆ. ಈ ವೇಳೆ ಮಗು ಕಿರುಚಿಕೊಳ್ಳುತ್ತಿದ್ದ ಸದ್ದನ್ನು ಕೇಳಿ ಸಂಬಂಧಿಕರು ಮನೆಯಿಂದ ಹೊರ ಬಂದಿದ್ದಾರೆ. ಮತ್ತು ಮಗು ಗಾಯಗೊಂಡಿರುವುದನ್ನು ನೋಡಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಬಾಲಕ ಮೃತಪಟ್ಟನು'' ಎಂದು ಮೃತರ ಸಂಬಂಧಿ ಮೊಹಮ್ಮದ್ ಶಹಜಾದ್ ತಿಳಿಸಿದ್ದಾರೆ.
ಗ್ರಾಮದಲ್ಲಿ ಸಂಚಲನ: ಮೊಹಮ್ಮದ್ ಶಫೀಕ್ ತಂದೆ ಮೊಹಮ್ಮದ್ ಸಿರಾಜ್ ಸೈಕಲ್ ನಲ್ಲಿ ತಿರುಗಾಡಿ ಬಟ್ಟೆ ಮಾರುತ್ತಾರೆ. ಬಂಧಿತ ಆರೋಪಿ ಶಿಕ್ಷಕನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮೃತ ಶಫೀಕ್ ಗ್ರಾಮದ ಮದ್ರಾಸದಲ್ಲಿ ಓದುತ್ತಿದ್ದ ಎಂಬುದು ತಿಳಿದುಬಂದಿದೆ. ಈ ಘಟನೆಯಿಂದ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.
ಇದನ್ನೂ ಓದಿ : ಹಳೇ ದ್ವೇಷದ ಹಿನ್ನೆಲೆ ಚಾಕು ಇರಿತ: ಚಿಕಿತ್ಸೆ ಫಲಿಸದೇ ಯುವಕ ಸಾವು, ಎರಡು ಗಂಟೆಯಲ್ಲಿಯೇ ಆರೋಪಿಗಳ ಬಂಧನ