ಆಗ್ರಾ(ಉತ್ತರ ಪ್ರದೇಶ): ಆಗ್ರಾ - ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಛಿದ್ರ ಛಿದ್ರವಾಗಿರುವ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದೆ. ಮೃತದೇಹದ ಮೇಲೆ ಭಾನುವಾರ ರಾತ್ರಿಯಿಡೀ ಒಂದರ ಹಿಂದೊಂದರಂತೆ ವಾಹನಗಳು ಸಂಚರಿಸಿದ್ದರಿಂದ ಮೃತದೇಹದ ಭಾಗಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿವೆ. ಮೃತದೇಹದ ಭಾಗಗಳು ಸುಮಾರು 500 ಮೀಟರ್ ದೂರದವರೆಗೆ ಹರಡಿವೆ. ಇನ್ನೂ ಕೆಲವು ಭಾಗಗಳು ರಸ್ತೆಗೆ ಅಂಟಿಕೊಂಡಿವೆ.
ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸೋಮವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ರಸ್ತೆಗೆ ಅಂಟಿಕೊಂಡಿದ್ದ ಮೃತ ದೇಹದ ಭಾಗಗಳನ್ನುಸಲಿಕೆಯ ಸಹಾಯದಿಂದ ಒಂದೊಂದಾಗಿ ತೆಗೆಯಲಾಯಿತು. ಮೃತದೇಹದ ಬಳಿ ಯಾವುದೇ ವಾಹನ ಪತ್ತೆಯಾಗಿಲ್ಲ. ಪೊಲೀಸರು ಕೊಲೆ ಮತ್ತು ಅಪಘಾತ ಆಯಾಮಗಳಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ಬಗ್ಗೆ ಫತೇಹಾಬಾದ್ ಎಸಿಪಿ ಗಿರೀಶ್ ಕುಮಾರ್ ಮಾತನಾಡಿ, "ಭಾನುವಾರ ರಾತ್ರಿ ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯ ಫತೇಹಾಬಾದ್ ಪ್ರದೇಶದಲ್ಲಿ ಕಿ.ಮೀ ಸಂಖ್ಯೆ 19ರಲ್ಲಿ ವಾಹನಗಳು ವ್ಯಕ್ತಿಯ ಮೃತದೇಹದ ಮೇಲೆ ಹರಿದಿವೆ. ಇದರಿಂದಾಗಿ ಮೃತದೇಹವು ಛಿದ್ರ ಛಿದ್ರವಾಗಿದೆ. ವಾಹನ ಚಾಲಕರು ಮಾನವೀಯತೆ ತೋರದೆ ಮೃತದೇಹದ ಮೇಲೆ ವಾಹನ ಹರಿಸಿದ್ದಾರೆ. ಸೋಮವಾರ ಬೆಳಗ್ಗೆ ಮಾಹಿತಿ ತಿಳಿದ ತಕ್ಷಣ ಫತೇಹಾಬಾದ್ ಪೊಲೀಸ್ ಠಾಣೆಯ ಠಾಣಾಧಿಕಾರಿ ದೇವೇಂದ್ರ ಸಿಂಗ್ ಸಿಬ್ಬಂದಿಯೊಂದಿಗೆ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಮೃತದೇಹದ ಭಾಗಗಳು ಸುಮಾರು 500 ಮೀಟರ್ ವರೆಗೆ ಹರಡಿಕೊಂಡಿದ್ದವು. ಮೃತದೇಹದ ಒಂದು ಬೆರಳು ಮಾತ್ರ ಯಾವುದೇ ಹಾನಿಯಾಗದೇ ಪತ್ತೆಯಾಗಿದೆ. ಅದರ ಸಹಾಯದಿಂದ ಪೊಲೀಸರು ಮೃತ ದೇಹವನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ" ಎಂದರು.
ಎಲ್ಲಾ ಆಯಾಮಗಳಿಂದ ತನಿಖೆ: "ಮೃತದೇಹ ಪತ್ತೆಯಾದ ಸ್ಥಳದಲ್ಲಿ ಯಾವುದೇ ವಾಹನ ಪತ್ತೆಯಾಗಿಲ್ಲ. ಹೀಗಾಗಿ ದುಷ್ಕರ್ಮಿಗಳು ಯುವಕನನ್ನು ಕೊಲೆ ಮಾಡಿದ ಬಳಿಕ ಎಕ್ಸ್ ಪ್ರೆಸ್ ವೇನಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಅಥವಾ ಯುವಕ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗುವಾಗ ವಾಹನ ಡಿಕ್ಕಿ ಹೊಡೆದಿರಬಹುದು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಹೇಗಾದರೂ ಮಾಡಿ ಶವವನ್ನು ಗುರುತಿಸುವುದು ಪೊಲೀಸರ ಮೊದಲ ಆದ್ಯತೆ. ಮೃತ ವ್ಯಕ್ತಿಯ ವಯಸ್ಸು ಸುಮಾರು 40 ವರ್ಷ ಇರಬಹುದು. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಂಡವನ್ನೂ ಕರೆಸಲಾಗಿತ್ತು. ಸ್ಥಳದಿಂದ ತಂಡ ಬೆರಳಚ್ಚು ಪಡೆದುಕೊಂಡಿದೆ" ಎಂದು ಹೇಳಿದರು.
ಇದನ್ನೂ ಓದಿ: ಎರಡು ಬೈಕ್ಗಳ ನಡುವೆ ಅಪಘಾತ: ತಂದೆ - ಮಗಳ ದಾರುಣ ಸಾವು, ಅಮ್ಮನ ಸ್ಥಿತಿ ಗಂಭೀರ