ಮಿರ್ಜಾಪುರ (ಉತ್ತರಪ್ರದೇಶ) : ಎಟಿಎಂಗೆ ಹಣ ತುಂಬುವ ವಾಹನದ ಮೇಲೆ ದಾಳಿ ಮಾಡಿದ ದರೋಡೆಕೋರರು ಕಾವಲು ಸಿಬ್ಬಂದಿ, ಕ್ಯಾಷಿಯರ್ ಸೇರಿ ಮೂವರ ಮೇಲೆ ಗುಂಡು ಹಾರಿಸಿ 39 ಲಕ್ಷ ರೂಪಾಯಿ ಹಣದ ಪೆಟ್ಟಿಗೆಯನ್ನು ಕದ್ದೊಯ್ದ ಘಟನೆ ಉತ್ತರಪ್ರದೇಶದ ಮಿರ್ಜಾಪುರದಲ್ಲಿ ಮಂಗಳವಾರ ನಡೆದಿದೆ. ಗಾರ್ಡ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ದರೋಡೆಯ ಭಯಾನಕ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.
ಕತ್ರಾ ಕೊಟ್ವಾಲಿ ಪ್ರದೇಶದ ಬೆಲ್ಟಾರ್‌ನಲ್ಲಿರುವ ಆಕ್ಸಿಸ್ ಬ್ಯಾಂಕ್ ಮುಂದೆ ಈ ಘಟನೆ ನಡೆದಿದೆ. ಮಧ್ಯಾಹ್ನ 12:30 ರ ಸುಮಾರಿಗೆ ಬ್ಯಾಂಕ್ ವಾಹನ ಭದ್ರತೆಯ ನಡುವೆ ಹಣವನ್ನು ಠೇವಣಿ ಮಾಡಲು ಬಂದಿತ್ತು. ಈ ವೇಳೆ ದುಷ್ಕರ್ಮಿಗಳ ಗುಂಪು ದಾಳಿ ಮಾಡಿದೆ. ವ್ಯಾನ್ನಲ್ಲಿ ಹಣ ಕಂಡ ತಕ್ಷಣ ಕಾವಲು ಸಿಬ್ಬಂದಿಯ ಹಿಂದಿನಿಂದ ಬಂದು ಸಮೀಪದಲ್ಲೇ ಗುಂಡು ಹಾರಿಸಿದ್ದಾರೆ. ನಂತರ ವಾಹನದಲ್ಲಿ ಹಣದ ಪೆಟ್ಟಿಗೆ ತೆಗೆದುಕೊಂಡು ರಾಜಾರೋಷವಾಗಿ ನಡೆದುಕೊಂಡು ಹೋಗಿದ್ದಾರೆ. ಗುರುತು ಸಿಗದಂತೆ ಎಲ್ಲರೂ ಹೆಲ್ಮೆಟ್ ಧರಿಸಿದ್ದರು. ಇದೇ ವೇಳೆ, ಕ್ಯಾಷಿಯರ್ ಮೇಲೂ ಗುಂಡು ಹಾರಿಸಿ, ಬೈಕ್ ಮೇಲೆ ತಪ್ಪಿಸಿಕೊಂಡು ಹೋಗಿದ್ದಾರೆ.
ಬ್ಯಾಂಕ್ ಹಣದ ವಾಹನ ದರೋಡೆ ಮಾಡಿ ಓಡಿ ಹೋಗುತ್ತಿದ್ದಾಗ ಮತ್ತೊಬ್ಬರು ಬೈಕ್ನಲ್ಲಿ ಬಂದು ತಡೆಯುವಾಗ ಅವರ ಮೇಲೂ ಗುಂಡು ಹಾರಿಸಲಾಗಿದೆ. ಜನನಿಬಿಡ ಪ್ರದೇಶದಲ್ಲಿ ಗುಂಡಿನ ಸದ್ದು ಕೇಳಿ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಘಟನೆಯ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಗುಂಡೇಟು ಬಿದ್ದ ಗಾರ್ಡ್ ಸಾವು : ವಾಹನದ ಬೆಂಗಾವಲು ಗಾರ್ಡ್ ಮೇಲೆ ಸಮೀಪದಿಂದಲೇ ಗುಂಡು ಹಾರಿಸಿದ್ದರಿಂದ ತೀವ್ರ ಗಾಯಗೊಂಡಿದ್ದರು. ಅವರನ್ನು ಇನ್ನೊಂದು ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿದರೂ, ತೀವ್ರ ರಕ್ತಸ್ರಾವದಿಂದಾಗಿ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಗುಂಡೇಟು ತಿಂದ ಕ್ಯಾಷಿಯರ್ ಮತ್ತು ಇನ್ನೋರ್ವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸಿಸಿಟಿವಿಯಲ್ಲಿ ದೃಶ್ಯ ಸೆರೆ: ಎರಡು ಬೈಕ್ನಲ್ಲಿದ್ದ ನಾಲ್ವರು ದುಷ್ಕರ್ಮಿಗಳು ಹೆಲ್ಮೆಟ್ ಧರಿಸಿದ್ದರು. ಒಬ್ಬನ ಕೈಯಲ್ಲಿ ಪಿಸ್ತೂಲು ಇತ್ತು. ವಾಹನದ ಮೇಲೆ ದಾಳಿ ನಡೆಸಿದ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು, ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಗುಂಡು ಹಾರಿಸುತ್ತಲೇ ಹಣದ ಡಬ್ಬವನ್ನು ಕದ್ದೊಯ್ಯಲಾಗಿದೆ. ಘಟನೆಯಲ್ಲಿ ಗಾರ್ಡ್ ಸಾವನ್ನಪ್ಪಿದ್ದಾನೆ. ಇನ್ನಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. 39 ಲಕ್ಷ ಕಳುವಾದ ಬಗ್ಗೆ ದೂರು ಬಂದಿದೆ. ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಲಾಗಿದೆ. ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Nipah virus: ಕೇರಳದಲ್ಲಿ ನಿಫಾ ವೈರಸ್ನಿಂದ ಇಬ್ಬರು ಸಾವು.. ಖಚಿತ ಪಡಿಸಿದ ಕೇಂದ್ರ ಆರೋಗ್ಯ ಸಚಿವ ಮಾಂಡವಿಯಾ