ಪ್ರಯಾಗರಾಜ್ (ಉತ್ತರ ಪ್ರದೇಶ) : ನಗರದ ಮೋತಿ ಲಾಲ್ ನೆಹರು ವೈದ್ಯಕೀಯ ಕಾಲೇಜು (ಎಂಎಲ್‌ಎನ್ ವೈದ್ಯಕೀಯ ಕಾಲೇಜು) ಹಾಸ್ಟೆಲ್ ಕೊಠಡಿಯಲ್ಲಿ ಮೂರನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಪ್ರಯಾಗ್‌ರಾಜ್‌ನ ಮೋತಿ ಲಾಲ್ ನೆಹರು ವೈದ್ಯಕೀಯ ಕಾಲೇಜಿನ ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಶ್ರುತಿ ಶ್ರೀವಾಸ್ತವ್ ಅವರ ಮೃತದೇಹ ಬಾಲಕಿಯರ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶ್ರುತಿ ಅವರ ತಂದೆ ಲಕ್ನೋದಲ್ಲಿ ವಾಸಿಸುತ್ತಿದ್ದು, ಅವರು ಮೂಲತಃ ಸುಲ್ತಾನ್‌ಪುರ ಜಿಲ್ಲೆಯವರು ಎಂದು ಹೇಳಲಾಗುತ್ತಿದೆ.
ಎಂಬಿಬಿಎಸ್ ಅಧ್ಯಯನಕ್ಕಾಗಿ 2020 ರಲ್ಲಿ ಶ್ರುತಿ ಪ್ರಯಾಗರಾಜ್‌ನ ಎಂಎಲ್‌ಎನ್ ವೈದ್ಯಕೀಯ ಕಾಲೇಜಿಗೆ ಬಂದಿದ್ದರು. ಶುಕ್ರವಾರ ಬೆಳಗ್ಗೆ ಹಾಸ್ಟೆಲ್‌ನಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ಆಕೆಯ ಸ್ನೇಹಿತೆಯರು, ಶ್ರುತಿ ಕೊಂಚ ಬೇಸರಗೊಂಡು ತನ್ನ ಕೋಣೆಗೆ ತೆರಳಿದ್ದನ್ನು ಗಮನಿಸಿದ್ದಾರೆ. ಸಂಜೆಯಾದರೂ ಆಕೆ ಕೊಠಡಿಯಿಂದ ಹೊರಗೆ ಬಾರದಿದ್ದಾಗ ಇತರ ವಿದ್ಯಾರ್ಥಿನಿಯರು ಆಕೆಯ ರೂಮ್ ಬಾಗಿಲು ತಟ್ಟಿದ್ದಾರೆ. ಬಹಳ ಹೊತ್ತಾದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಹಾಸ್ಟೆಲ್ ವಾರ್ಡನ್‌ಗೆ ಮಾಹಿತಿ ನೀಡಿದ್ದಾರೆ. ಬಳಿಕ ಕೊಠಡಿಯ ಕಿಟಕಿ ಒಡೆದು ಒಳಗೆ ಇಣುಕಿ ನೋಡಿದಾಗ ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿದ್ದಾಳೆ.
ಈ ಬಗ್ಗೆ ಪೊಲೀಸರು ಹಾಗೂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಜೊತೆಗೆ ಪೊಲೀಸರು ಆಕೆಯ ಕೊಠಡಿ ಶೋಧಿಸಿದ್ದು, ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ, ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ.
ಈ ಕುರಿತು ಮಾಹಿತಿ ನೀಡಿದ ಹಾಸ್ಟೆಲ್‌ನ ಇತರ ವಿದ್ಯಾರ್ಥಿಗಳು, ಬೆಳಗ್ಗೆ ಯಾರಿಗೂ ಏನನ್ನೂ ಹೇಳದೆ ಕೊಠಡಿಯೊಳಗೆ ಹೋದ ಶ್ರುತಿ ಮತ್ತೆ ಹೊರಗೆ ಬರಲಿಲ್ಲ. ಸಂಜೆ ವೇಳೆಗೆ ಇತರೆ ವಿದ್ಯಾರ್ಥಿನಿಯರು ಆಕೆಯನ್ನು ಹೊರಗೆ ನೋಡದ ಕಾರಣ ಕರೆ ಮಾಡಿದಾಗ ಅವಳು ಸ್ವೀಕರಿಸಲಿಲ್ಲ, ನಂತರ ಕೆಲ ವಿದ್ಯಾರ್ಥಿನಿಯರು ಆಕೆಯ ಕೋಣೆಯ ಬಾಗಿಲು ತಟ್ಟಿದರೂ ಒಳಗಿನಿಂದ ಯಾವುದೇ ಉತ್ತರ ಬರಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ : ಮಂಗಳೂರಿನಲ್ಲಿ 60 ಬಸ್ಗಳ ಒಡೆಯ ಆತ್ಮಹತ್ಯೆ.. ಸಾಲು ಸಾಲು ಬಸ್ಗಳೊಂದಿಗೆ ಮಾಲೀಕನ ಅಂತಿಮಯಾತ್ರೆ
ಎಂಎಲ್‌ಎನ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಪಿ.ಸಿಂಗ್ ಮಾತನಾಡಿ, "ವಿದ್ಯಾರ್ಥಿನಿಯ ಕುಟುಂಬ ಇತ್ತೀಚೆಗೆ ಆಕೆಯನ್ನು ಭೇಟಿಯಾಗಲು ಹಾಸ್ಟೆಲ್ಗೆ ಹೋಗಿದ್ದರು. ಆಕೆ ಕಳೆದ ಕೆಲವು ದಿನಗಳಿಂದ ಒತ್ತಡದಲ್ಲಿದ್ದಳು, ಇದರಿಂದಾಗಿ ಅವಳ ಸಹಪಾಠಿ ಕೂಡ ಅಸಮಾಧಾನಗೊಂಡು ಕೊಠಡಿಯನ್ನು ಬದಲಾಯಿಸಿದ್ದಳು. ಇದಾದ ನಂತರ ಶ್ರುತಿ ಕೋಣೆಯಲ್ಲಿ ಒಬ್ಬಳೇ ಇರುತ್ತಿದ್ದಳು. ಆದರೆ, ಸ್ಥಳಕ್ಕಾಗಮಿಸಿದ ಪೊಲೀಸರಿಗೆ ಕೊಠಡಿಯಿಂದ ಆತ್ಮಹತ್ಯೆಗೆ ಸಂಬಂಧಿಸಿದ ಯಾವುದೇ ಪತ್ರ ಲಭ್ಯವಾಗಿಲ್ಲ. ಆತ್ಮಹತ್ಯೆಗೆ ಕಾರಣವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ನಿರತರಾಗಿದ್ದಾರೆ ಎಂದರು.
ಇದನ್ನೂ ಓದಿ : ಹೈದರಾಬಾದ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ: ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ